144 ಸೈಬರ್ ಕ್ರೈಂ ಪ್ರಕರಣಗಳು ದಾಖಲು; ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್

ಮಂಗಳೂರು: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 144 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳಿಂದ ನಗರದಲ್ಲಿ ಸೈಬರ್ ಅಪರಾಧ ಪ್ರಕರಣ ಹೆಚ್ಚಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಸೈಬರ್ ಅಪರಾಧ ಪ್ರಕರಣಗಳಲ್ಲಿ ಹೊರ ರಾಜ್ಯದ ಜನರು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾತ್ರವಲ್ಲ ಅನೇಕ ಜನರು ಸೈಬರ್ ಅಪರಾಧ ಪ್ರಕರಣಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನಗರದಲ್ಲಿ ದೂರು ದಾಖಲಿಸಲಾಗಿದೆ. ಓರ್ವ ವ್ಯಕ್ತಿ ಕಡಿಮೆ ಬಡ್ಡಿಗೆ ಸಾಲ ನೀಡುವ ನೆಪದಲ್ಲಿ ಜನರಿಗೆ ಕರೆ ಮಾಡಿ ವಂಚನೆ ನಡೆಸುತ್ತಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಚರಕ್‌ಪುರಿಯಲ್ಲಿ ಗುರುತಿಸಿಕೊಂಡಿರುವ ಯೂಸುಫ್ ಖಾನ್ (30) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳಾದ ನೌಶಾದ್ ಮತ್ತು ಪ್ರಭಾಕರ್ ಎಂಬವರು ಪರಾರಿಯಾಗಿದ್ದಾರೆ ಎಂದು ತಿಳಿಸಿದರು.

ಬಂಧಿತ ಆರೋಪಿಯಿಂದ ರೂ. 70,000 ನಗದು, 2 ಲ್ಯಾಪ್‌ಟಾಪ್ ಮತ್ತು 31 ಮೊಬೈಲ್ ಫೋನ್ ಮತ್ತು ಕರೆ ವಿವರಗಳನ್ನು ಬರೆಯಲಾದ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 6 ತಿಂಗಳಿನಿಂದ ಇಂತಹ ಪ್ರಕರಣಗಳು ನಗರದಲ್ಲಿ ನಡೆಯುತ್ತಿದೆ. 60 ರಿಂದ 70 ಜನರು ಸೈಬರ್ ಅಪರಾಧ ಪ್ರಕರಣಗಳಿಗೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!