ಸಿದ್ದರಾಮಯ್ಯರನ್ನು ಡಿಕೆಶಿ ವಿರುದ್ಧ ಎತ್ತಿಕಟ್ಟಲು ಮಾಧ್ಯಮ ಸುದ್ದಿ ತಿರುಚಿದೆ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ ಎ.4 : ಡಿಕೆ ಶಿವಕುಮಾರ್ ಅವರಿಗೆ ಹೈ ಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡಲಾರದು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಡಿಕೆ ಶಿವಕುಮಾರ್ ವಿರುದ್ಧ ಎತ್ತಿ ಕಟ್ಟುವ ರೀತಿಯಲ್ಲಿ ಮಾಧ್ಯಮದಲ್ಲಿ ಸುದ್ದಿ ತಿರುಚಲಾಗಿದೆ ಎಂದು ಆರೋಪ ಮಾಡಿದೆ.
ಟಿವಿ ಸಂದರ್ಶನವೊಂದರಲ್ಲಿ ಸಿದ್ದರಾಮಯ್ಯ ಅವರಿಗೆ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ಕೇಳಿದ ಪ್ರಶ್ನೆಗೆ, “ಸಿಎಂ ಸ್ಥಾನಕ್ಕೆ ನಾನು ಅಭ್ಯರ್ಥಿಯಾಗಿದ್ದು, ಡಿಕೆ ಶಿವಕುಮಾರ್ ಕೂಡಾ ಅಭ್ಯರ್ಥಿ.ಆದರೆ, ಡಿಕೆ ಶಿವಕುಮಾರ್ ಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ” ಎಂದು ಅವರು ಉತ್ತರಿಸಿದ್ದಾರೆಂದು ಮಾಧ್ಯಮ ತನ್ನ ವರದಿಯಲ್ಲಿ ಹೇಳಿತ್ತು.
ಆದರೆ, ಸದ್ಯ ಬಿಡುಗಡೆಯಾಗಿರುವ ಸಂದರ್ಶನದ ವಿಡಿಯೋದಲ್ಲಿ ಸಿದ್ದರಾಮಯ್ಯ ಎಲ್ಲೂ ಡಿಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೇಳಿರುವುದು ಕಂಡು ಬಂದಿಲ್ಲ. ಬದಲಾಗಿ, ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ ಆಕಾಂಕ್ಷಿ, ಡಿಕೆ ಶಿವಕುಮಾರ್ ಕೂಡಾ ಆಕಾಂಕ್ಷಿ. ಪ್ರಜಾಪ್ರಭುತ್ವದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಬಯಸುವುದು ತಪ್ಪೇನಿಲ್ಲ. ಆದರೆ, ಯಾರು ಸಿಎಂ ಆಗಬೇಕೆಂದು ಶಾಸಕರು ಆಯ್ಕೆ ಮಾಡುತ್ತಾರೆ, ಅಂತಿಮ ತೀರ್ಮಾನ ಹೈಕಮಾಂಡ್ ಮಾಡುತ್ತದೆ ಎಂದು ಸಿದ್ದರಾಮಯ್ಯ ಉತ್ತರಿಸಿದ್ದಾರೆ ಎಂದು ತಿಳಿಸಿದೆ.
ಸದ್ಯ, ಈ ವಿಡಿಯೋ ಹಾಗೂ ಎನ್‌ಡಿಟಿವಿಯ ವರದಿಯನ್ನು ಹಂಚಿಕೊಂಡಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬಿಜೆಪಿಯ ಶಾಸಕರು, ಎಮ್‌ಎಲ್‌ಸಿಗಳು ಪಕ್ಷ ತೊರೆಯುತ್ತಿದ್ದಾರೆ, ಬಿಜೆಪಿ ಅದಾನಿಯ ಎನ್‌ಡಿಟಿವಿಯನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರಲ್ಲಿ ಇಲ್ಲದ ಒಡಕನ್ನು ಸೃಷ್ಟಿಸುತ್ತಿದೆ. 40% ಸರ್ಕಾರ ತನ್ನ ಪಾಪಗಳಿಗೆ ಬೆಲೆ ತೆರಬೇಕಾಗುತ್ತದೆ, ಟಿವಿ ಚಾನೆಲ್‌ಗಳೂ ಅದನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.