‘ಕರಾವಳಿ ಅಭಿವೃದ್ಧಿಗೆ ₹100 ಕೋಟಿ ಅನುದಾನಕ್ಕೆ ಬೇಡಿಕೆ: ಮಟ್ಟಾರು

ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಎಲ್ಲ ಪ್ರಾಧಿಕಾರಗಳಿಗೂ ಹೆಚ್ಚಿನ ಅನುದಾನ ಒದಗಿಸಿ, ಸ್ವಾಯತ್ತತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಕರಾವಳಿ ಆರ್ಥಿಕಾಭಿವೃದ್ಧಿ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಅಭಿವೃದ್ಧಿ ಪ್ರಾಧಿಕಾರಗಳು ಅನುದಾನದ ಕೊರತೆ ಮತ್ತು ಅಧಿಕಾರದ ಮಿತಿಯಿಂದ ಬಳಲುತ್ತಿವೆ. ಇದರಿಂದ ಅವುಗಳನ್ನು ಹೊರತರಲು ಸ್ವಾಯತ್ತತೆ ನೀಡುವ ಅಗತ್ಯವಿದೆ’ ಎಂದರು.

ಪ್ರಾಧಿಕಾರಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಬೇಕಿದೆ. ಸಿಬ್ಬಂದಿ ನೇಮಕಾತಿಯೂ ಅಗತ್ಯವಿದೆ. ಎಲ್ಲ ಅಭಿವೃದ್ಧಿ ಪ್ರಾಧಿಕಾರಿಗಳ ಅಧ್ಯಕ್ಷರು ಮತ್ತು ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೂ ಈ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ವಿದೇಶಿ ಹೂಡಿಕೆಗೆ ಆಹ್ವಾನ: ಗುಜರಾತ್‌ನಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಷ್ಠಾನಕ್ಕೆ ತರಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಜನರ ಆದಾಯ ಹೆಚ್ಚುತ್ತದೆ. ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದರು.

ಖಾಸಗಿ ಉದ್ಯಮಿಗಳು ಕೈಗೆತ್ತಿಕೊಳ್ಳುವ ಯೋಜನೆಗಳಿಗೆ ಅನುಮತಿ ನೀಡುವ ವಿಚಾರದಲ್ಲಿ ವಿವಿಧ ಇಲಾಖೆಗಳು ವಿಳಂಬ ನೀತಿ ಅನುಸರಿಸುತ್ತಿವೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಈ ಕಾರಣದಿಂದ ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಎಲ್ಲ ಅನುಮತಿಗಳನ್ನು ಏಕಕಾಲಕ್ಕೆ ನೀಡುವ ಕ್ರಮವನ್ನು ಜಾರಿಗೊಳಿಸುವಂತೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ‘ಕರಾವಳಿ ಪ್ರದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ. ಅಧಿಕಾರಿಗಳು ಎಲ್ಲ ಕೆಲಸಗಳ ಕಡತಗಳನ್ನೂ ರಾಜ್ಯ ಮಟ್ಟಕ್ಕೆ ಕಳುಹಿಸಬಾರದು. ಜಿಲ್ಲಾ ಮಟ್ಟದಲ್ಲಿ ಸಾಧ್ಯವಿರುವ ಕೆಲಸಗಳನ್ನು ಇಲ್ಲಿಯೇ ಒಪ್ಪಿಗೆ ನೀಡಿ, ಪೂರ್ಣಗೊಳಿಸಬೇಕು’ ಎಂದರು.

ಹಡಗು ಸೇವೆಗೆ ಒಲವು: ಆ್ಯಂಗ್ರಿಯಾ ಕ್ರೂಸ್ ಮಾಲೀಕ ಸಂಜಯ್ ಕುಲಕರ್ಣಿ ಮಾತನಾಡಿ, ‘ನಮ್ಮ ಕಂಪನಿ ಗೋವಾ ಮತ್ತು ಮುಂಬೈ ನಡುವೆ ಈಗಾಗಲೇ ಐಷಾರಾಮಿ ಹಡಗಿನ (ಕ್ರೂಸ್) ಸೇವೆ ನೀಡುತ್ತಿದೆ. ಮುಂಬೈ– ಮಂಗಳೂರು ನಡುವೆಯೂ ಸೇವೆ ಒದಗಿಸಲು ನಾವು ಸಿದ್ಧ’ ಎಂದು ತಿಳಿಸಿದರು.

₹ 100 ಕೋಟಿ ಅನುದಾನಕ್ಕೆ ಬೇಡಿಕೆ

‘ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಜೆಟ್‌ನಲ್ಲಿ ಕನಿಷ್ಠ ₹ 100 ಕೋಟಿ ಅನುದಾನ ಒದಗಿಸಬೇಕು’ ಎಂದು ಪ್ರಾಧಿಕಾರದ ನೂತನ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಒತ್ತಾಯಿಸಿದರು.

‘ಕೇವಲ ಪ್ರಾಧಿಕಾರದ ಹೆಸರಿನ ಫಲಕ ಹಾಕಿಕೊಂಡು ಕಾರಿನಲ್ಲಿ ತಿರುಗಿದರೆ ಸಾಕಾಗುವುದಿಲ್ಲ. ಈ ಭಾಗದ ಅಭಿವೃದ್ಧಿಗೆ ಕೆಲಸ ಮಾಡಲು ಅನುದಾನ ಬೇಕು. ಶೀಘ್ರದಲ್ಲೇ ಕರಾವಳಿಯ ಮೂರೂ ಜಿಲ್ಲೆಗಳ ಶಾಸಕರೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದರು.

‘ಮಂಗಳೂರು– ಅತ್ರಾಡಿ ರಾಜ್ಯ ಹೆದ್ದಾರಿ 67ರ ಅಭಿವೃದ್ಧಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿದೆ. ಲೋಕೋಪಯೋಗಿ ಇಲಾಖೆ ಈ ಕುರಿತು ಪರಿಶೀಲನೆ ನಡೆಸುತ್ತಿದೆ’ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದರು.

‘₹ 780 ಕೋಟಿ ವೆಚ್ಚದಲ್ಲಿ ಮಂಗಳೂರು– ಕಾರವಾರ ಮೀನುಗಾರಿಕಾ ರಸ್ತೆ ಅಭಿವೃದ್ಧಿಗೂ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಲ್ಲಿಸಿದೆ. 11 ಸುಸಜ್ಜಿತ ಮೀನು ಮಾರುಕಟ್ಟೆಗಳು ಸೇರಿದಂತೆ 35 ಮೀನು ಮಾರುಕಟ್ಟೆಗಳನ್ನು ಪ್ರಾಧಿಕಾರದಿಂದ ನಿರ್ಮಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 25 ಮತ್ತು ಉಡುಪಿ ಜಿಲ್ಲೆಯ 26 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ರೂಪಿಸಲು ಡಿಪಿಆರ್‌ ಸಿದ್ಧಪಡಿಸಿ, ಸಲ್ಲಿಸಿದೆ’ ಎಂದರು.

2019–20ನೇ ಆರ್ಥಿಕ ವರ್ಷದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಂಚಿಕೆಯಾಗಿದ್ದ ₹ 11.09 ಕೋಟಿ ಅನುದಾನದಲ್ಲಿ ₹ 7.09 ಕೋಟಿಯನ್ನು ಬಳಕೆ ಮಾಡಿದೆ. 200 ಕಾಮಗಾರಿಗಳಲ್ಲಿ 92 ಪೂರ್ಣಗೊಂಡಿವೆ. 2020–21ರಲ್ಲಿ ₹ 20 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಗುರಿ ಇದೆ ಎಂದು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!