ವಿಷಾನಿಲ ಸೋರಿಕೆ 10 ಮಂದಿಯ ಸಾವು,1 ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ: ಮೃತರ ಕುಟುಂಬಕ್ಕೆ 1ಕೋಟಿ ಪರಿಹಾರ
ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿಗಳಿಸಿದ್ದ ವಿಶಾಖಪಟ್ಟಣದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಅಧಿಕ ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಎಲ್ ಜಿ ಪಾಲಿಮರ್ಸ್ ಕಾರ್ಖಾನೆಯಿಂದ ಲೀಕ್ ಆದ ವಿಷಾನಿಲದಲ್ಲಿ ‘ಸ್ಟೈರೀನ್’ ವಿಷಕಾರಿ ರಾಸಾಯನಿಕವಿತ್ತು.
ವಿಶಾಖಪಟ್ಟಣ ಜಿಲ್ಲೆಯ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರುಪಾಯಿ ಪರಿಹಾರವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ.
ಇಂದು ಮುಂಜಾನೆ ಸುಮಾರು 3 ಗಂಟೆ ಹೊತ್ತಿನಲ್ಲಿ ವಿಶಾಖಪಟ್ಟಣಂನ ಗೋಪಾಲಪಟ್ಟಣದ, ನಾಯ್ಡು ತೋಟಾ ಸಮೀಪದ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರಿಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ 9 ಗ್ರಾಮ ಮತ್ತು ಇತರೆ ಪ್ರದೇಶಗಳಿಗೆ ಹರಡಿದೆ. ಪರಿಣಾಮ ಬೆಳಗ್ಗೆ ವಾಕಿಂಗ್ ಗೆ ಮತ್ತು ಇತರೆ ಕಾರ್ಯಗಳಿಗೆ ಬಂದವರು ವಿಷಾನಿಲವನ್ನು ಉಸಿರಾಡಿದ ಕೂಡಲೇ ಅಸ್ವಸ್ಥರಾಗಿದ್ದಾರೆ. ಮೂಲಗಳ ಪ್ರಕಾರ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಇಷ್ಟು ಮಂದಿಯ ಪ್ರಾಣಕ್ಕೆ ಕುತ್ತು ತಂದಿದ್ದು, ಇದೇ ‘ಸ್ಟೈರೀನ್’ ರಾಸಾಯನಿಕ ಎಂಬುದನ್ನು ತಜ್ಞರು ಪತ್ತೆ ಮಾಡಿದ್ದಾರೆ.
ಇಷ್ಟಕ್ಕೂ ಏನಿದು ಸ್ಟೈರೀನ್ ಗ್ಯಾಸ್? ಅದರಿಂದ ಏನು ಅಪಾಯ?
ಸ್ಟೈರೀನ್ (Styrene) ಪ್ಲಾಸ್ಟಿಕ್ ತಯಾರಿಕೆಗೆ ಉಪಯೋಗಿಸುವ ರಾಸಾಯನಿಕ ಸಂಯುಕ್ತವಾಗಿದೆ. ಬೆಂಜೀನ್ ರಾಸಾಯನಿಕದಿಂದ ಇದನ್ನು ಪಡೆಯಬಹುದು. ರಸಾಯನಶಾಸ್ತ್ರದಲ್ಲಿ ಇದಕ್ಕೆ ಇಥೆನೈಲ್ ಬೆಂಜೀನ್, ವೀನೈಲ್ ಬೆಂಜೀನ್ ಮತ್ತು ಫೀನೈಲ್ ಈಥೀನ್ ಎನ್ನುತ್ತಾರೆ. C6H5CH=CH2 ಇದರ ರಾಸಾಯನಿಕ ಸೂತ್ರವಾಗಿದೆ.
ಸ್ಟೈರೀನ್ ಅನ್ನು ಯಾವುದಕ್ಕೆ ಬಳಸುತ್ತಾರೆ?
ಸ್ಟೈರೀನ್ ಲ್ಯಾಟೆಕ್ಸ್, ಸಿಂಥೆಟಿಕ್ ರಬ್ಬರ್ ಮತ್ತು ಪಾಲಿಸ್ಟೈರೀನ್ ರಾಳಗಳನ್ನು ತಯಾರಿಸಲು ಬಳಸುವ ರಾಸಾಯನಿಕವಾಗಿದೆ. ಅಲ್ಲದೆ ಪಾಲಿಸ್ಟೈರೀನ್ ಪ್ಲಾಸ್ಟಿಕ್ ಮತ್ತು ಅಂಟುಗಳ ತಯಾರಿಕೆಗೆ ಈ ಸ್ಟೈರೀನ್ ರಸಾಯನಿಕವನ್ನು ಉಪಯೋಗಿಸಲಾಗುತ್ತದೆ. ಜಿಡ್ಡಿನಂತಿರುವ ಈ ಅನಿಲಕ್ಕೆ ಬಣ್ಣ ಇರುವುದಿಲ್ಲ. ಕೆಲವೊಮ್ಮೆ ಇದು ನಸು ಹಳದಿಯಂತೆ ತೋರಬಹುದು. ರಾಸಾಯನಿಕ ಪ್ರಮಾಣ ಹೆಚ್ಚಾಗಿದ್ದರೆ ವಾಸನೆ ಕಠಿಣವಾಗಿರುತ್ತದೆ. ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಹಾಗೇ ಈ ರಾಸಾಯನಿಕವು ಗಾಳಿಗೆ ಬಂದರೆ ಬಹಳ ಬೇಗ ಆವಿಯಾಗಿಹೋಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಸ್ಟೈರೀನ್ ಅನಿಲ ಹೆಚ್ಚಾಗಿ ಸೇವಿಸಿದಾಗ ಏನಾಗುತ್ತದೆ?
ಸ್ಟೈರೀನ್ ಅನಿಲವನ್ನು ಉಸಿರಾಡಿದಾಗ ಕಣ್ಣು ಉರಿಯುತ್ತದೆ, ಗಂಟಲು ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಉಸಿರಾಟಕ್ಕೆ ತೀವ್ರ ತೊಂದರೆಯಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಈ ಗ್ಯಾಸ್ ಅನ್ನು ಉಸಿರಾಡಿದಾಗ ದೇಹದ ಮುಖ್ಯ ನರ ವ್ಯವಸ್ಥೆಗೆ ಘಾಸಿಯಾಗಬಹುದು. ಇದರಿಂದ ತಲೆನೋವು, ಸುಸ್ತು, ಅಶಕ್ತಿ, ಖಿನ್ನತೆ, ಕಿವುಡು ಇತ್ಯಾದಿ ಬಾಧಿಸಬಹುದು. ಕೆಲ ಅಧ್ಯಯನಗಳಲ್ಲಿ ಲ್ಯೂಕೆಮಿಯಾ, ಲಿಂಫೋಮಾ ಮೊದಲಾದ ತೊಂದರೆಗಳಿಗೆ ಈ ಅನಿಲ ಕಾರಣವಾಗಬಹುದು ಎಂದು ಎನ್ ಡಿಆರ್ ಎಫ್ ನಿರ್ದೇಶಕ ಎಸ್ ಎನ್ ಪ್ರಧಾನ್ ಹೇಳಿದ್ದಾರೆ.
ನಮ್ಮ ಸಹಜ ವಾತಾವರಣದಲ್ಲಿ ಆಮ್ಲಜನಕದಂತೆ ಹಲವು ಅನಿಲಗಳು ಇದ್ದು, ಅದೇ ರೀತಿಯಲ್ಲೆ ಸ್ಟೈರೀನ್ ಕೂಡ ಇರುತ್ತದೆ. ಕಟ್ಟಡ ನಿರ್ಮಾಣ ವಸ್ತುಗಳು, ಬಳಕೆದಾರ ವಸ್ತುಗಳು, ತಂಬಾಕು ಹೊಗೆಯಿಂದ ಈ ಅನಿಲ ಬರಬಹುದು. ಪ್ಲಾಸ್ಟಿಕ್ ಕಾರ್ಖಾನೆಗಳಿಂದ ಇದು ಹೆಚ್ಚು ಹೊರಹೊಮ್ಮುವ ಸಾಧ್ಯತೆ ಇರುತ್ತದೆ. ಇನ್ನು ಕೆಲ ಅಧ್ಯಯನಗಳಲ್ಲಿ ಸ್ಟೈರೀನ್ ನಿಂದಾಗಿ ಕ್ಯಾನ್ಸರ್ ಬರುತ್ತದೆ ಎಂಬ ವಾದವಿದೆಯಾದರೂ ಅದಕ್ಕೆ ಪೂರಕ ಅಂಶಗಳು ಲಭ್ಯವಾಗಿಲ್ಲ. ಇನ್ನು ಈ ಸ್ಟೈರೀನ್ ರಾಸಾಯನಿಕವನ್ನು ನೇರವಾಗಿ ನಿರ್ವಹಣೆ ಮಾಡುವ ಕಾರ್ಮಿಕರಲ್ಲಿ ಕಣ್ಣಿನ ಕೆರೆತ, ಉಸಿರಾಟದ ತೊಂದರೆ ಸಾಮಾನ್ಯವಾಗಿರುತ್ತದೆ. ದೀರ್ಘಕಾಲದಲ್ಲಿ ಇದು ಮಾನವನ ನರಮಂಡಲದ ಮೇಲೆಯೇ ಘಾಸಿ ಮಾಡುತ್ತದೆ. ಇದರಿಂದ ತಲೆನೋವು, ತಲೆ ಭಾರ, ಆಯಾಸ, ದೌರ್ಬಲ್ಯ ಮತ್ತು ಖಿನ್ನತೆ, ಶ್ರವಣ ದೋಷದಂತಹ ಸಮಸ್ಯೆಗಳು ಕಾಡುತ್ತವೆ.
ಎಲ್ ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ಇದರ ಬಳಕೆ ಹೇಗೆ?
ಪ್ರಸ್ತುತ ವಿಷಾನಿಲ ಸೋರಿಕೆ ಮೂಲಕ ಸುದ್ದಿಗೆ ಗ್ರಾಸವಾಗಿರುವ ಎಲ್ ಜಿ ಪಾಲಿಮರ್ಸ್ ಕಾರ್ಖಾನೆ ಮಕ್ಕಳ ಪ್ಲಾಸ್ಟಿಕ್ ಆಟಿಕೆಗಳ ತಯಾರಿಕಾ ಸಂಸ್ಥೆಯಾಗಿದೆ. ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯನ್ನು 1961ರಲ್ಲಿ ನಿರ್ಮಾಣ ಮಾಡಲಾಗಿತ್ತು. ಆರಂಭದಲ್ಲಿ ಇದಕ್ಕೆ ಹಿಂದೂಸ್ತಾನ್ ಪಾಲಿಮರ್ಸ್ ಎಂದು ಹೆಸರಿತ್ತು. ಬಳಿಕ 1978ರಲ್ಲಿ ಮೆಕ್ ಡೊವೆಲ್ ಮತ್ತು ಕಂಪನಿ ಲಿಮಿಟೆಡ್ ಆಫ್ ಯುಬಿ ಸಮೂಹದೊಂದಿಗೆ ವಿಲೀನಗೊಂಡಿತ್ತು. ಎಲ್ ಜಿ ಪಾಲಿಮರ್ಸ್ ಸಂಸ್ಥೆ ಪ್ಲಾಸ್ಟಿಕ್ ವಸ್ತುಗಳಾದ ಪ್ಲಾಸ್ಟಿಕ್ ಪ್ಯಾಕೇಜಿಂಗ್, ಬಿಸಾಡಬಹುದಾದ ಕಪ್ ಗಳು ಮತ್ತು ಪಾತ್ರೆಗಳು ಇತರೆ ವಸ್ತುಗಳ ತಯಾರಿಕೆ ಮಾಡುತ್ತದೆ. ಈ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಗಾಗಿಯೇ ಸ್ಟೈರೀನ್ ರಾಸಾಯನಿಕವನ್ನು ಬಳಸಲಾಗುತ್ತಿತ್ತು ಎಂದು ಸಂಸ್ಥೆ ಹೇಳಿಕೊಂಡಿದೆ. ಲಾಕ್ ಡೌನ್ ಬಳಿಕ ಕಾರ್ಖಾನೆ ಪುನಾರಂಭಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಈ ರಾಸಾಯನಿರಕ ಅನಿಲ ಸೋರಿಕೆಯಾಗಿದೆ.