ಮುಂಬೈನಲ್ಲಿ ಒಂದೇ ದಿನ 10 ಮಂದಿ ಸಾವು, ದೇಶಾದ್ಯಂತ ಸಾವಿನ ಸಂಖ್ಯೆ 206ಕ್ಕೆ, ಸೋಂಕಿತರ ಸಂಖ್ಯೆ 6761
ನವದೆಹಲಿ: ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ಗೆ ಮುಂಬೈನಲ್ಲಿ ಒಂದೇ ದಿನ 10 ಮಂದಿ ಬಲಿಯಾಗಿದ್ದು, ದೇಶಾದ್ಯಂತ ಸಾವಿನ ಸಂಖ್ಯೆ 206ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 896 ಕೊವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ದೇಶದಲ್ಲಿ ಕೊರೋನಾ ದೃಢ ಪಟ್ಟ ಪ್ರಕರಣಗಳ ಸಂಖ್ಯೆ 6761ಕ್ಕೆ ತಲುಪಿದೆ. ಇದುವರೆಗೆ ಒಟ್ಟು ೫೦೩ ಮಂದಿ ಕೊರೋನಾ ರೋಗದಿಂದ ಚೇತರಿಸಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನಿಂದ ದೇಶಾದ್ಯಂತ 33 ಮಂದಿ ಮೃತಪಟ್ಟಿದ್ದು, ಈವರೆಗೆ 206 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮುಂಬೈನಲ್ಲಿ ಇಂದು ಮತ್ತೆ 218 ಕೊವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ವಾಣಿಜ್ಯ ನಗರಿಯಲ್ಲಿ ಸೋಂಕಿತರ ಸಂಖ್ಯೆ 993ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇಂದು ಒಂದೇ ದಿನ 10 ಮಂದಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 64ಕ್ಕೆ ಏರಿಕೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
ಇದೇ ವೇಳೆ ಕೊರೋನಾ ಸಮುದಾಯಿಕ ಹಂತ ತಲುಪಿದೆ ಎಂಬ ಪಂಜಾಬ್ ಮುಖ್ಯಮಂತ್ರಿ ಅಮರಿಂದ್ ಸಿಂಗ್ ಅವರ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ದೇಶದಲ್ಲಿ ಕೊರೋನಾ ಇನ್ನೂ ಸಮುದಾಯಿಕ ಹಂತ ತಲುಪಿಲ್ಲ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಈಗ ಕೊರೋನಾ ಸಮುದಾಯಿಕ ಹಂತ ತಲುಪಿದೆಯೇ ಅಥವಾ ಇಲ್ಲ ಎಂಬುದು ಮುಖ್ಯವಲ್ಲ. ಆದರೆ ನಾವು ಎಲ್ಲಾ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ