ಕಟ್ಟಡ ಕಾರ್ಮಿಕರಿಗೆ 1 ಸಾವಿರ ವೇತನ, 2 ತಿಂಗಳ ಪಡಿತರ ಮುಂಗಡ ವಿತರಣೆ: ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ
ಬೆಂಗಳೂರು: ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ 1 ಸಾವಿರ ವೇತನ, 2 ತಿಂಗಳ ಪಡಿತರ ಮುಂಗಡ ವಿತರಣೆ ಸಹಿತ ಕರ್ನಾಟಕ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಕರ್ನಾಟಕದಲ್ಲೂ ಮಾರಕ ಕೊರೋನಾ ವೈರಸ್ ಹಬ್ಬುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಇದೇ ಕಾರಣಕ್ಕೆ ಸಾರ್ವಜನಿಕರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ 1000 ರೂ ಸಹಾಯ ಧನ ನೀಡಲು ನಿರ್ಧರಿಸಲಾಗಿದೆ. ಅಂತೆಯೇ ರೇಷನ್ ಕಾರ್ಡ್ ಹೊಂದಿರುವವರಿಗೆ 2 ತಿಂಗಳ ಪಡಿತರವನ್ನು ಮುಂಗಡವಾಗಿ ನೀಡಲು ಸೂಚನೆ ನೀಡಲಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನೂ ಕೂಡ ಮುಂಗಡವಾಗಿ ನೀಡಲು ಸರ್ಕಾರ ನಿರ್ಧರಿಸಿದ್ದು, ಎರಡು ತಿಂಗಳ ಮಾನವ ದಿನಗಳ ಬಾಬ್ತು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಅಂತೆಯೇ ಬಡವರ ಬಂಧು ಯೋಜನೆಯಲ್ಲಿ ಸಾಲ ಪಡೆದವರ ಸಂಪೂರ್ಣ ಸಾಲ ಮನ್ನಾ ಮಾಡುದಾಗಿ ಸರ್ಕಾರ ಘೋಷಣೆ ಮಾಡಿದೆ.
ಕೊರೋನಾ ಸೋಂಕು ತಡೆಯಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ: ಬಿ.ಎಸ್.ಯಡಿಯೂರಪ್ಪ
ಸಂಕಷ್ಟ ಸಂದರ್ಭದಲ್ಲಿ ರಾಜ್ಯದ ಎಲ್ಲ ಸಾಮಾಜಿಕ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಬಡವರಿಗೆ ಎರಡು ತಿಂಗಳು ಪಿಂಚಣಿ ಗಳನ್ನು ಮುಂಗಡ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಪ್ರಕಟಿಸಿದರು. ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ನರೇಗಾ ಯೋಜನೆಯ ಹೆಚ್ಚುವರಿ ಮಾನವ ದಿನಗಳ ಬಾಬತ್ತು ಮುಂಗಡ ಹಣವನ್ನು ಬಿಡುಗಡೆ ಮಾಡಲಾಗುವುದು. ಎರಡು ತಿಂಗಳ ರೇಷನ್ ಅನ್ನು ಪಡಿತರ ಚೀಟಿದಾರರಿಗೆ ತಕ್ಷಣ ವಿತರಣೆಯನ್ನು ಮಾಡಲಾಗುವುದು. 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಲಾ 1000 ರೂ ನೀಡಲು ನಿರ್ಧಾರ ಕೈಗೊಂಡಿದ್ದೇವೆ, ಬಡವರ ಬಂಧು ಯೋಜನೆಯ ಸಾಲ ಮನ್ನಾ 2018-19 ನೇ ಸಾಲಿನ 9.10 ಕೋಟಿ ರೂ.ಮೊತ್ತವನ್ನು 15,120 ಜನರಿಗೆ, 2019-20ನೇ ಸಾಲಿನ 5.16 ಕೋಟಿ ರೂ.ಮೊತ್ತವನ್ನು 6,500 ಜನರಿಗೆ ಸೇರಿ ಒಟ್ಟು 13.20 ಕೋಟಿ ರೂ.ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದರು.
ಮೋದಿ ಬಗ್ಗೆ ಯಡಿಯೂರಪ್ಪ ಗುಣಗಾನ ಮಾಡಿದ ಯಡಿಯೂರಪ್ಪ, ಮೋದಿ ವಿಫಲವಾಗಿದ್ದರೆ ಅವರನ್ನು ಎರಡನೇ ಬಾರಿ ಜನ ಗೆಲ್ಲಿಸುತ್ತಿರಲಿಲ್ಲ. ಅತಿ ಹೆಚ್ಚು ಅಂದರೆ 303 ಸೀಟುಗಳನ್ನು ಜನಕೊಟ್ಟಿದ್ದಾರೆ. ಹೀಗಾಗಿ ಜನರು ಮೋದಿಯನ್ನು ಒಪ್ಪಿಕೊಂಡಿದ್ದಾರೆ. ಜಗತ್ತಿನ ಅನೇಕ ಪ್ರಮುಖರು ಮೋದಿಯನ್ನು ರಾಜಕೀಯ ಮುತ್ಸದ್ಧಿ ಎಂದು ಕರೆದಿದ್ದಾರೆ. ಹೀಗಾಗಿ ಮೋದಿ ವಿಫಲ ನಾಯಕನಲ್ಲ. ಕೇಂದ್ರದಿಂದ ಅನುದಾನ ಇತರೆ ರಾಜ್ಯಗಳಲ್ಲೂ ಕಡಿಮೆಯಾಗಿದೆ ಎಂದು ಯಡಿಯೂರಪ್ಪ ಹೇಳಿದರು. ಕೇಂದ್ರ ಸರ್ಕಾರದಿಂದ 15ನೇ ಹಣಕಾಸು ಆಯೋಗದಿಂದ ಈ ಬಾರಿ 11,887 ಕೋಟಿ ರೂ ಕಡಿತವಾಗಿದೆ. ನಾನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ. ನಮ್ಮ ಪಾಲಿನ ಹಣ ಬಂದೇ ಬರುತ್ತದೆ ಎಂಬ ವಿಶ್ವಾಸವಿದೆ. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಸಾಲಿಗೆ ಸೇರಿದ ಕಾರಣದಿಂದಾಗಿ ಬಿಹಾರಕ್ಕಿಂತ ನಮಗೆ ಕಡಿಮೆ ಅನುದಾನ ದೊರಕಿದೆ. ಈ ತಾಂತ್ರಿಕ ಸಮಸ್ಯೆ ಬಗೆ ಹರಿಸುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.