ಕಡಬ: ಒಟಿಪಿ ಹಂಚಿಕೊಂಡ ಬ್ಯಾಂಕ್ ಗ್ರಾಹಕರಿಗೆ 1ಲಕ್ಷ ರೂ. ವಂಚನೆ
ಕಡಬ: ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಗ್ರಾಹಕನೊಬ್ಬನಿಗೆ ಕರೆ ಮಾಡಿ ಒಟಿಪಿ ಸಂಖ್ಯೆ ಪಡೆದು 99,900 ರೂ. ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಕೋಡಿಂಬಳ ಗ್ರಾಮದ ಬೆದ್ರಾಜೆ ಮೂಲದ ಧರಣೇಂದ್ರ ಜೈನ್ ವಂಚನೆಗೊಳಗಾದ ವ್ಯಕ್ತಿ. ಕಡಬ ದುರ್ಗಾಂಬಿಕಾ ದೇವಾಲಯ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಜೈನ್ ವಿಜಯಾ ಬ್ಯಾಂಕ್ ಖಾತೆದಾರರಾಗಿದ್ದು ಇದೇ ಖಾತೆಯಿಂದ ಬಹುದೊಡ್ಡ ಮೊತ್ತದ ಹಣ ಇದೀಗ ಕಳ್ಳನ ಪಾಲಾಗಿದೆ.
ಶುಕ್ರವಾರ ಸಂಜೆ ವ್ಯಕ್ತಿಯೊಬ್ಬರಿಂದ ಜೈನ್ ಕರೆಯನ್ನು ಸ್ವೀಕರಿಸಿದ್ದಾರೆ. ಏರ್‌ಟೆಲ್ ಗ್ರಾಹಕ ಸಹಾಯ ಕೇಂದ್ರದ ಉದ್ಯೋಗಿ ಎಂದು ಎಂದು ಪರಿಚಯಿಸಿಕೊಂಡ ಅಪರಿಚಿತ ವಂಚಕ ಕನ್ನಡದಲ್ಲೇ ಮಾತನಾಡಿದ್ದ. ಫೋನ್ ಸಂಖ್ಯೆಯನ್ನು ಸಕ್ರಿಯಗೊಳಿಸಲು ಅತ ಒಟಿಪಿ ಸಂಖ್ಯೆಯನ್ನು ಕೇಳಿದ್ದ.
ಒಟಿಪಿ ಸಂಖ್ಯೆ ಸಿಕ್ಕಿದ ಕೂಡಲೇ ಜೈನ್ ತನ್ನ ಮಗನ ಸಹಾಯದಿಂದ ಕರೆ ಮಾಡಿದವರ ಸಂಖ್ಯೆಗೆ ಕಳುಹಿದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ವಿಜಯ ಬ್ಯಾಂಕಿನಲ್ಲಿರುವ ಜೈನ್ ಅವರ ಖಾತೆಯಲ್ಲಿ 50,000 ರೂ. ವಿತ್ ಡ್ರಾ ಆಗಿತ್ತು. ಅಷ್ಟು ಮಾತ್ರವಲ್ಲ ಶನಿವಾರ ಮುಂಜಾನೆ 25,000 ಮತ್ತು 24,900 ರೂ. ಸಹ ಅದೇ ಖಾತೆಯಿಂದ ಡೆಬಿಟ್ ಆಗಿದೆ.
ಈ ಸಂಬಂಧ ಜೈನ್ ಸೋಮವಾರ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೇ ರೀತಿಯ ಘಟನೆಯಲ್ಲಿ, ಕಡಬದ ಮಹಿಳೆಯೊಬ್ಬರಿಗೆ ಗೂಗಲ್ ಪೇ ಮೂಲಕ 6,000 ರೂ.ಗಳನ್ನು ಕಳುಹಿಸಲು ಕೇಳಲಾಯಿತು ಮತ್ತು ನಂತರ ವಂಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಸಹ ಇದೇ ಠಾಣೆಯಲ್ಲಿ ದೂರು ದಾಖಲಾಗಿದೆ.