ಬಡವರಿಗಾಗಿ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ

ನವದೆಹಲಿ: ಮಾರಕ ಕೊರೋನಾ ವೈರಸ್ ಪ್ರಸರಣ ತಡೆಗೆ ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿ, ಕೋವಿಡ್‌–19ನಿಂದ ಆರ್ಥಿಕತೆ ಮೇಲೆ ಆಗಿರುವ ಪ್ರಭಾವವನ್ನು ತಗ್ಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಹಾಗೂ ಆರ್ಥಿಕ ಚೇತರಿಕೆ ಪ್ಯಾಕೇಜ್‌ ಸಿದ್ಧಪಡಿಸುವಂತೆ ಸೂಚಿಸಿದ್ದರು. ಅದರಂತೆ ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ನಿಯಂತ್ರಿಸುವ ಮತ್ತು ಸೋಂಕು ಬಾದಿತ ಜನರಿಗೆ ಪರಿಹಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇಂದು 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ವಲಸೆ ಬಂದಿರುವ ಕಾರ್ಮಿಕರು, ಗ್ರಾಮೀಣ ಹಾಗೂ ನಗರ ಪ್ರದೇಶದ ಬಡ ಜನರಿಗಾಗಿ 1.7 ಲಕ್ಷ ಕೋಟಿ ರೂ ಪ್ಯಾಕೇಜ್‌ ಸಿದ್ಧವಿದ್ದು, ಯಾರೂ ಸಹ ಹಸಿವಿನಿಂದ ಇರಲು ಬಿಡುವುದಿಲ್ಲ ಎಂದು ಹೇಳಿದರು. 

ಘೋಷಣೆ ಮಾಡಿದ ಪ್ಯಾಕೇಜ್ ವಿವರ.
– ಮುಂದಿನ 3 ತಿಂಗಳವರೆಗೂ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಜಾರಿಯಲ್ಲಿರಲಿದ್ದು, ಇದರ ಅಡಿಯಲ್ಲಿ 80 ಕೋಟಿ ಬಡ ಜನರಿಗೆ ಅಗತ್ಯ ಆಹಾರ ಪದಾರ್ಥ ಸಿಗಲಿದೆ. ಈಗಾಗಲೇ ಪ್ರತಿ ವ್ಯಕ್ತಿಗೆ ನಿಗದಿಯಾಗಿರುವ 5 ಕೆ.ಜಿ ಅಕ್ಕಿ ಅಥವಾ ಗೋದಿಯ ಜತೆಗೆ 5ಕೆ.ಜಿ. ಅಕ್ಕಿ ಅಥವಾ ಗೋದಿಯಂತಹ ಆಹಾರ ಪದಾರ್ಥ ಉಚಿತವಾಗಿ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ಬೇಳೆ (ಪ್ರಾಂತ್ಯಗಳಿಗೆ ಅನುಗುಣವಾಗಿ) ಸಿಗಲಿದೆ. 
– ಮಹಿಳಾ ಜನ ಧನ್‌ ಖಾತೆ ಹೊಂದಿರುವವರು ಪ್ರತಿ ತಿಂಗಳಿಗೆ 500 ಪಡೆಯಲಿದ್ದಾರೆ. ಇದು ಮುಂದಿನ 3 ತಿಂಗಳ ವರೆಗೂ ಮುಂದುವರಿಯಲಿದೆ.
– ಉಜ್ವಲ ಯೋಜನೆ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸಂಪರ್ಕ ಪಡೆದಿರುವ ಮಹಿಳೆಯರಿಗೆ 3 ತಿಂಗಳ ವರೆಗೂ ಮೂರು ಅನಿಲ ಸಿಲಿಂಡರ್‌ ಗಳು ಉಚಿತವಾಗಿ ಪೂರೈಕೆಯಾಗಲಿದೆ. ಇದರಿಂದಾಗಿ 8 ಕೋಟಿ ಮಹಿಳೆಯರು ಲಾಭ ಪಡೆಯಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
-ನಗದು ವರ್ಗಾವಣೆ ಯೋಜನೆ ಅಡಿಯಲ್ಲಿ ಅಂಗವಿಕಲರು, ರೈತರು ಹಾಗೂ ಬಡ ಪಿಂಚಣಿದಾರರನ್ನು ತಲುಪುವ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ದೇಶದ ಸುಮಾರು 8.6 ಕೋಟಿ ರೈತರು ಏಪ್ರಿಲ್‌ ಮೊದಲ ವಾರದಲ್ಲಿ 2,000 ಹಣವನ್ನು ನೇರ ವರ್ಗಾವಣೆ ಅಡಿಯಲ್ಲಿ ಪಡೆಯಲಿದ್ದಾರೆ.
– ಕೊರೊನಾ ವೈರಸ್‌ ಸೊಂಕಿತರಿಗೆ ಚಿಕಿತ್ಸೆ ನೀಡುತ್ತಿರುವವರು, ಸೋಂಕಿನ ಅಪಾಯ ಇರುವವರಿಗೆ ಆರೋಗ್ಯ ವಿಮೆ ಒದಗಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮೆ ಘೋಷಣೆ ಮಾಡಲಾಗಿದೆ.
-ಹಿರಿಯ ನಾಗರಿಕರು, ವಿಧವೆ, ಅಂಗವಿಕರಿಗೆ ಒಂದು ಬಾರಿಯ ಪರಿಹಾರ ಮೊತ್ತ ರೂ1,000 ಸಿಗಲಿದೆ. ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಲಿದ್ದು, ಸುಮಾರು 3 ಕೋಟಿ ಜನರಿಗೆ ಇದರಿಂದ ಅನುಕೂಲವಾಗಲಿದೆ.
-ನರೇಗಾ ವೇತನ ದಿನವೊಂದಕ್ಕೆ 182 ರೂ.ಗಳಿಂದ 202 ರೂ.ಗಳಿಗೆ ಏರಿಕೆ, 5 ಕೋಟಿ ಕುಟುಂಬಗಳು ಫಲಾನುಭವಿಗಳು
-3 ತಿಂಗಳು ಸಂಘಟಿತ ವಲಯದ ಕಾರ್ಮಿಕರಿಗೆ ಪಿಎಫ್ ಹಣ. ಶೇ.75ರಷ್ಟು ಡ್ರಾ ಮಾಡಲು ಅವಕಾಶ, ಸರ್ಕಾರದಿಂದಲೇ 3 ತಿಂಗಳ ಪಿಎಫ್‌ ಪಾವತಿ, ಇದಕ್ಕಾಗಿ ಶೇ.24ರಷ್ಟು ಪಿಎಫ್ ಹಣ ಸರ್ಕಾರ ಭರಿಸುತ್ತದೆ. ಗರಿಷ್ಠ ಶೇ.75ರಷ್ಟು ಹಣ ವಿತ್ ಡ್ರಾ ಅವಕಾಶ

Leave a Reply

Your email address will not be published. Required fields are marked *

error: Content is protected !!