ಒಂದು ಕಿಟ್‌ಗೆ ₹245, ಸರ್ಕಾರ ಪಾವತಿಸಿದ್ದು ₹600: ಲೂಟಿ ಹೊಡೆದವರು ಯಾರು…?
ನವದೆಹಲಿ: ಆ್ಯಂಟಿಬಾಡಿ ಟೆಸ್ಟ್ ಕಿಟ್‌ಗಳಿಗೆ ಸರ್ಕಾರವು ಮಾರುಕಟ್ಟೆ ದರಕ್ಕಿಂತ ಭಾರಿ ಹೆಚ್ಚು ಹಣ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಚೆನ್ನೈನ ಆಮದು ಕಂಪನಿ ಮ್ಯಾಟ್ರಿಕ್ಸ್ ಲ್ಯಾಬ್ಸ್ ಮತ್ತು ವಿತರಕರಾದ ರಿಯಲ್ ಮೆಟಬಾಲಿಕ್ಸ್ ನಡುವೆ ಕಿಟ್‌ಗಳ ದರಕ್ಕೆ ಸಂಬಂಧಿಸಿ ನಡೆದಿರುವ ಜಟಾಪಟಿಯಿಂದಾಗಿ ಹೆಚ್ಚು ದರಕ್ಕೆ ಕಿಟ್ ಖರೀದಿಸಿರುವ ವಿಚಾರ ಬಹಿರಂಗವಾಗಿದೆ. ಖರೀದಿ ದರ ಮತ್ತು ವಿತರಕರು ಸರ್ಕಾರಕ್ಕೆ ನಿಗದಿ ಮಾಡಿರುವ ಬೆಲೆಯ ನಡುವೆ ಭಾರಿ ವ್ಯತ್ಯಾಸ ಇದೆ ಎಂದು ಮ್ಯಾಟ್ರಿಕ್ಸ್ ಲ್ಯಾಬ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದೆ. ಆಮದು ಕಂಪನಿಯು ಒಂದು ಕಿಟ್‌ಗೆ ₹245 ಪಾವತಿಸಿದೆ. ಆದರೆ, ಸರ್ಕಾರಕ್ಕೆ ಅದನ್ನು ₹600ಕ್ಕೆ ಮಾರಾಟ ಮಾಡಲಾಗಿದೆ ಎಂದು ಮ್ಯಾಟ್ರಿಕ್ಸ್ ಹೇಳಿದೆ. ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳು ದುಬಾರಿ ದರಕ್ಕೆ ಕಿಟ್‌ಗಳನ್ನು ಖರೀದಿ ಮಾಡಿವೆ ಎಂದು ಕಾಂಗ್ರೆಸ್ ಮತ್ತು ಡಿಎಂಕೆ ಆರೋಪ ಮಾಡಿವೆ. ಚೀನಾದ ಕಂಪನಿಯಿಂದ ಸಾಧನಗಳನ್ನು ವಿತರಿಸುವ ಏಕೈಕ ಕಂಪನಿಯು ಉತ್ತಮ ದರವನ್ನು ಸೂಚಿಸಿದ್ದರಿಂದ ಆ ಕಂಪನಿಯಿಂದ ಕಿಟ್‌ಗಳನ್ನು ಖರೀದಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಹಗರಣದಿಂದಾಗಿ ಪ್ರತಿ ಭಾರತೀಯನೂ ಅಪಮಾನಗೊಳ್ಳುವಂತಾಗಿದೆ. ತ್ವರಿತವಾಗಿ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಪ್ರಧಾನಿ ನೋಡಿಕೊಳ್ಳಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಒತ್ತಾಯಿಸಿದ್ದಾರೆ. ‘ವಂಡ್‌ಫಾರ್ ಕಂಪನಿಯನ್ನು ನೇರವಾಗಿ ಸಂಪರ್ಕಿಸಲಾಗಿತ್ತು. ಆದರೆ, ಆ ಕಂಪನಿಯು ನೂರರಷ್ಟು ಮೊತ್ತವನ್ನು ಮೊದಲೇ ಪಾವತಿಸಬೇಕು. ಕಿಟ್‌ಗಳನ್ನು ಯಾವಾಗ ನೀಡಲಾಗುವುದು ಎಂಬುದನ್ನು ಖಚಿತವಾಗಿ ತಿಳಿಸಲು ಸಾಧ್ಯವಿಲ್ಲ ಎಂದು ವಂಡ್‌ಫಾರ್ ಹೇಳಿತ್ತು. ಹಾಗಾಗಿ, ವಂಡ್‌ಫಾರ್‌ನ ಭಾರತದ ವಿತರಕ ಕಂಪನಿಯನ್ನು ಸಂಪರ್ಕಿಸಿ, ಅದರ ಜತೆಗೆ ಒಪ್ಪಂದ ಮಾಡಿಕೊಳ್ಳಲಾಯಿತು’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಹೇಳಿದೆ. ರ‍್ಯಾಪಿಡ್ ಕಿಟ್ ಬಳಕೆ ಸ್ಥಗಿತ ಚೀನಾದ ಎರಡು ಕಂಪನಿಗಳಿಂದ ತರಿಸಲಾದ ರ‍್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆ ಕಿಟ್‌ಗಳ ಬಳಕೆ ನಿಲ್ಲಿಸುವಂತೆ ರಾಜ್ಯಗಳಿಗೆ ಐಸಿಎಂಆರ್ ಸೂಚಿಸಿದೆ. ಈ ಪರೀಕ್ಷೆಗಳ ಫಲಿತಾಂಶದಲ್ಲಿ ನಿಖರತೆ ಇಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯಗಳ ಬಳಿ ಉಳಿದಿರುವ ಕಿಟ್‌ಗಳನ್ನು ವಾಪಸ್ ನೀಡುವಂತೆ ಸೂಚಿಸಲಾಗಿದೆ. ಅವುಗಳನ್ನು ಚೀನಾದ ಕಂಪನಿಗೆ ಹಿಂದಿರುಗಿಸಲು ತೀರ್ಮಾನಿಸಲಾಗಿದೆ. ಕೊರೊನಾ ವೈರಾಣು ಸೋಂಕಿತರ ಪರೀಕ್ಷೆಯನ್ನು ಹೆಚ್ಚಿಸಬೇಕು ಎಂಬ ಕಾರಣಕ್ಕೆ ರ‍್ಯಾಪಿಡ್ ಟೆಸ್ಟ್ ಕಿಟ್‌ಗಳನ್ನು ಬಳಸಲು ನಿರ್ಧರಿಸಲಾಗಿತ್ತು. ಹೀಗಾಗಿ ಚೀನಾದಿಂದ ಐದು ಲಕ್ಷ ಕಿಟ್‌ಗಳನ್ನು ತರಿಸಲಾಗಿತ್ತು. ಗ್ಯಾಂಗ್‌ಜೌ ವಂಡ್‌ಫೊ ಬಯೊಟೆಕ್ ಮತ್ತು ಝುಹಾಯ್ ಲಿವ್‌ಜಾನ್ ಡಯೊಗ್ನಾಸ್ಟಿಕ್ಸ್ ಕಂಪನಿಗಳು ಪೂರೈಸಿದ ಕಿಟ್‌ಗಳು ದೋಷಪೂರಿತ ಎಂದು ಹೇಳಲಾಗಿದೆ. ಚೀನಾದಿಂದ ತರಿಸಿದ ಕಿಟ್‌ಗಳನ್ನು ವಿವಿಧ ರಾಜ್ಯಗಳಿಗೆ ಪೂರೈಸಲಾಗಿತ್ತು. ಅವುಗಳು ದೋಷಪೂರಿತ ಎಂದು ರಾಜಸ್ಥಾನ ಸರ್ಕಾರ ಮೊದಲಿಗೆ ದೂರು ನೀಡಿತ್ತು. * ದೇಶ ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ ಕೆಲವರು ಅಕ್ರಮವಾಗಿ ಲಾಭ ಮಾಡಲು ಯತ್ನಿಸುತ್ತಿದ್ದಾರೆ. ಈ ಭ್ರಷ್ಟ ಮನಸ್ಥಿತಿಯ ಬಗ್ಗೆ ನಾಚಿಕೆ ಎನಿಸುತ್ತಿದೆ. –ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ. |