ಹಿರಿಯಡ್ಕ: ಕಲುಷಿತ ನೀರು ಬಿಟ್ಟ ವಿಚಾರಕ್ಕೆ ನೆರೆಮನೆಯವರ ಹೊಡೆದಾಟ

ಹಿರಿಯಡ್ಕ ಅ.20(ಉಡುಪಿ ಟೈಮ್ಸ್ ವರದಿ): ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.

ಈ ಬಗ್ಗೆ ಕಾಜರಗುತ್ತುವಿನ ಶ್ರೀನಿವಾಸ ನಗರದ ನವೀನ್ ಕೋಟ್ಯಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ನವೀನ್ ಕೋಟ್ಯಾನ್ ಅವರ ತಂದೆ ಸುಂದರ ಮರಕಲ ಅವರು, ಮನೆಯ ಎದುರು ಇರುವ ಚರಂಡಿಗೆ ಪಕ್ಕದ ಮನೆಯ ಸುದರ್ಶನ ಎಸ್ ಶೆಟ್ಟಿ ಎಂಬುವವರು ಕಲುಷಿತ ತ್ಯಾಜ್ಯ ನೀರನ್ನು ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ತಿಂಗಳ ಹಿಂದೆ ಪಂಚಾಯಿತಿಅಬಿವೃದ್ದಿ ಅಧಿಕಾರಿಯವರಿಗೆ ದೂರು ನೀಡಿದ್ದರು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಯವರು ಇನ್ನು ಮುಂದೆ ಈ ರೀತಿ ಮಾಡದಂತೆ ತಾಕಿತು ಮಾಡಿದ್ದರು.

ಬಳಿಕ ಅ.19 ರಂದು ಸುಂದರ ಮರಕಲ ಹಾಗೂ ಅವರ ಮಗಳು ಅರುಣ ಕೋಟ್ಯಾನ್ ರವರು ದಿನನಿತ್ಯದ ಕಾರ್ಯದಲ್ಲಿ ತೊಡಗಿರುವಾಗ ಸುದರ್ಶನ್‍ರವರು ಇವರ ಮನೆಗೆ ಅಕ್ರಮ ಪ್ರವೇಶ ಮಾಡಿ ಇಬ್ಬರಿಗೂ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ನವೀನ್ ರ ತಂದೆ ಹಾಗೂ ಅಕ್ಕ ಅಜ್ಜರಕಾಡು ಅಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಈ ವಿಚಾರವಾಗಿ ಭವ್ಯ ಎಂಬವರು ಪ್ರತಿದೂರು ದಾಖಲಿಸಿದ್ದು ಅದರಂತೆ ಅ.19 ರಂದು ದೂರುದಾರರ ಅತ್ತೆ ಸುನೀತಾ ಹಾಗೂ ಮೈದುನ ಸುದರ್ಶನ ಶೆಟ್ಟಿರವರು ಮನೆಯಿಂದ ಒಂದು ಬುಟ್ಟಿ ಮರಳು ತರಲು ಹೋಗುತ್ತಿರುವ ವೇಳೆ ದೂರುದಾರರ ಎದುರು ಮನೆಯ ಸುಂದರ ಹಾಗೂ ಆತನ ಮಗಳು ಅರುಣ ಭವ್ಯ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಏಕಾಏಕಿ ಹಲ್ಲೆ ಮಾಡಿರುವುದಾಗಿ, ತಡೆಯಲು ಬಂದ ಸುದರ್ಶನ ಶೆಟ್ಟಿ ಇವರಿಗೂ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದಾಗಿ ಸುದರ್ಶನರವರಿಗೆ ಎದೆ ನೋವು ಕಾಣಿಸಿಕೊಂಡು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Leave a Reply

Your email address will not be published. Required fields are marked *

error: Content is protected !!