ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿದ ಅತೃಪ್ತ ಶಾಸಕರು
ಬೆಂಗಳೂರು: ದೋಸ್ತಿ ಸರ್ಕಾರದ ರೆಬೆಲ್ ಶಾಸಕರು ಓಡೋಡಿ ಬಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಿದ್ದಾರೆ.
ಅತೃಪ್ತ ಶಾಸಕರು ಗುರುವಾರ ಮುಂಬೈನಿಂದ ವಿಶೇಷ ವಿಮಾನದಲ್ಲಿ ಎಚ್ಎಎಲ್ಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿತ್ತು. ರೆಬೆಲ್ ಶಾಸಕರಿದ್ದ ಮೊದಲ ವಿಮಾನವು ಎಚ್ಎಎಲ್ನಲ್ಲಿ ಸಂಜೆ 5.30ಕ್ಕೆ ಲ್ಯಾಂಡ್ ಆದರೆ ಎರಡನೇ ವಿಮಾನವೂ ಸಂಜೆ 5.42ಕ್ಕೆ ಲ್ಯಾಂಡ್ ಆಯಿತು.
ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಸಂಜೆ 6 ಗಂಟೆಯ ಒಳಗಾಗಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸ್ಪೀಕರ್ ರಮೇಶ್ ಕುಮಾರ್ ಅವರು ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಸರಿಯಾದ ಸಮಯಕ್ಕೆ ಹೋಗದಿದ್ದರೆ ಅವರು ಕಚೇರಿಯಿಂದ ಹೊರ ನಡೆಯುತ್ತಾರೆ ಎಂದು ಅರಿತ ಶಾಸಕರು ಓಡೋಡಿ ಮಿನಿ ಬಸ್ ಏರಿದರು.
ಎರಡನೇ ವಿಮಾನದಲ್ಲಿ ಆಗಮಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾರಿನಲ್ಲಿ ವಿಧಾನಸಭೆಯ ಕಡೆಗೆ ಪ್ರಯಾಣ ಬೆಳೆಸಿದರು. ಸಂಜೆ 6.01ಕ್ಕೆ ಬಸ್ ವಿಧಾನಸೌಧ ತಲುಪುತ್ತಿದ್ದಂತೆ ಶಾಸಕ ಬೈರತಿ ಬಸವರಾಜ್ ರಾಜೀನಾಮೆ ಪತ್ರ ಹಿಡಿದುಕೊಂಡು ಓಡುತ್ತಲೇ ಸ್ಪೀಕರ್ ಕಚೇರಿ ತಲುಪಿದರು. ಅವರ ಬೆನ್ನಲ್ಲೇ ಉಳಿದ ಅತೃಪ್ತ ಶಾಸಕರು ಬೈರತಿ ಬಸವರಾಜ್ ಅವರನ್ನು ಸೇರಿಕೊಂಡರು.
ರೆಬಲ್ ಶಾಸಕರು ಎಚ್ಎಎಲ್ನಿಂದ ಸ್ಪೀಕರ್ ಕಚೇರಿ ತಲುಪುವವರೆಗೂ ಭಾರೀ ಭದ್ರತೆ ಒದಗಿಸಲಾಗಿತ್ತು. ಶಾಸಕರನ್ನು ಯಾರೂ ತಡೆದು ನಿಲ್ಲಿಸದಂತೆ ಪೊಲೀಸರು ರಕ್ಷಣೆ ಒದಗಿಸಿದರು. ಪೊಲೀಸ್ ಸಿಬ್ಬಂದಿ ಸಹ ಕ್ಯಾಮೆರಾ ಮೂಲಕ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು.