ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ ಜಾರಿ ವಿರುದ್ಧ ಪ್ರತಿಭಟನೆ
ಉಡುಪಿ: ಕೇಂದ್ರ ಸರ್ಕಾರದ ಉದ್ದೇಶಿತ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ ಜಾರಿ ವಿರುದ್ಧ ಸೆ.19ರಂದು ಬೆಂಗಳೂರಿನಲ್ಲಿ ‘ಕಟ್ಟಡ ಕಾರ್ಮಿಕರ ವಿಧಾನಸೌಧ ಚಲೋ’ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಸಂಚಾಲಕ ಸುರೇಶ್ ಕಲ್ಲಾಗರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ವಿರೋಧಿಯಾಗಿರುವ ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ ಜಾರಿಯಾದರೆ, 1996ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನುಗಳು ರದ್ದಾಗಲಿವೆ. ಪರಿಣಾಮ ದೇಶದ 4 ಕೋಟಿ ಹಾಗೂ ರಾಜ್ಯದಲ್ಲಿ ನೋಂದಣಿಯಾಗಿರುವ 20 ಲಕ್ಷ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ರದ್ದಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಿಯಲ್ ಎಸ್ಟೇಟ್ ಹಾಗೂ ಉದ್ಯಮಿಗಳ ಒತ್ತಡಕ್ಕೆ ಮಣಿದು ಕಟ್ಟಡ ಕಾರ್ಮಿಕ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ. ₹ 10 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಕಟ್ಟಡ ಕಟ್ಟುವಾಗ ಶೇ 1ರಷ್ಟು ಸೆಸ್ ಅನ್ನು ಕಾರ್ಮಿಕರ ಕಲ್ಯಾಣ ಮಂಡಳಿಗೆ ಭರಿಸಬೇಕು ಎಂಬ ನಿಯಮವನ್ನು ಕೈಬಿಡಲು ಕೇಂದ್ರ ಉದ್ದೇಶಿಸಿದೆ ಎಂದು ವಾಗ್ದಾಳಿ ನಡೆಸಿದರು.
ಕಾರ್ಮಿಕ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ₹ 8,000 ಕೋಟಿ ಹಾಗೂ ಇತರೆ ಎಲ್ಲ ರಾಜ್ಯಗಳ ಮಂಡಳಿಗಳಲ್ಲಿ ಇರುವ ₹ 70,000 ಕೋಟಿಯನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳಲು ಕೇಂದ್ರ ಷಡ್ಯಂತ್ರ ನಡೆಸಿದೆ. ಕಾರ್ಮಿಕರು ಸವಲತ್ತುಗಳನ್ನು ಪಡೆಯಬೇಕಾದರೆ ಆನ್‌ಲೈನ್ ಅರ್ಜಿ ಹಾಕಬೇಕು. ಕಟ್ಟಡ ಕಾರ್ಮಿಕರು ಬಹುತೇಕ ಅನಕ್ಷರಸ್ಥರಾಗಿದ್ದು, ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ಸುರಕ್ಷಾ ಕಲ್ಯಾಣ ಮಸೂದೆ ಜಾರಿಯಾದರೆ ಕಟ್ಟಡ ಕಾರ್ಮಿಕರ ನೋಂದಣಿ, ನವೀಕರಣ, ಹಣಕಾಸು ಸಂಗ್ರಹ, ಹಣಕಾಸು ವಿತರಣೆ ಎಲ್ಲವೂ ಖಾಸಗಿ ಸಂಸ್ಥೆಗೆ ವಹಿಸಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು