ಸಹಕಾರಿ ಬ್ಯಾಂಕ್ ರಿಸರ್ವ್ ಬ್ಯಾಂಕ್ ವ್ಯಾಪ್ತಿಗೆ: ನಿರ್ಮಲಾ ಸೀತಾರಾಮನ್
ನವದೆಹಲಿ: ದೇಶದ ಆರ್ಥಿಕತೆ ಮಂದಗತಿಯಲ್ಲಿರುವುದನ್ನು ಬಹಳ ಹಿಂದಿನಿಂದಲೂ ಹೇಳಲಾಗುತಿತ್ತು ಎಂದಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕ್ಷಿಪ್ರಗತಿಯಲ್ಲಿ ಆರ್ಥಿಕ ಬೆಳವಣಿಗೆ ಕಷ್ಟಸಾಧ್ಯ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ನಲ್ಲಿ 20 ಬಿಲಿಯನ್ ಮೌಲ್ಯದ ಕಾರ್ಪೋರೇಟ್ ತೆರಿಗೆ ಕಡಿತದ ನಂತರ ಕಂಪನಿಗಳು ಹೊಸ ಹೂಡಿಕೆಗಳನ್ನು ಯೋಚಿಸುತ್ತಿವೆ. ವಾಸ್ತವಿಕವಾಗಿ ಈ ಹೂಡಿಕೆಗಳನ್ನು ಕಾರ್ಯರೂಪಕ್ಕೆ ಬರಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
2013ರಿಂದಲೂ ಕುಸಿತದಲ್ಲಿರುವ ಆರ್ಥಿಕತೆಯನ್ನು ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಗಸ್ಟ್ ತಿಂಗಳಿನಿಂದ ಅನೇಕ ಕ್ರಮಗಳನ್ನು ಕೈಗೊಂಡಿದೆ.
ನಿಧಾನಗತಿಯ ಆರ್ಥಿಕ ಪ್ರಗತಿ ಹಾಗೂ ಆದಾಯದ ನಡುವೆ ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಕಳೆದ ವಾರ ದೇಶದ ಸಾಲವನ್ನು ಋಣಾತ್ಮಕ ದೃಷ್ಟಿಕೋನದಲ್ಲಿ ಹೇಳಿರುವುದರಿಂದ ಆರ್ಥಿಕ ಶಿಸ್ತಿಗಾಗಿ ಕಾರ್ಪೋರೇಟ್ ತೆರಿಗೆ ಕಡಿತದಂತಹ ಅಚ್ಚರಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ತನ್ನ ಹಣಕಾಸಿನ ಕೊರತೆಯ ಸಮಸ್ಯೆಗಳನ್ನು ಬೇಗನೆ ಸುಧಾರಿಸಿಕೊಳ್ಳಲಿದೆ ಅಂತಾ ಹೇಳುವುದಕ್ಕೆ ಆಗಲ್ಲ. ಆದಾಗ್ಯೂ,ಸರ್ಕಾರದ ಆಸ್ತಿ ಮಾರಾಟ ಕಾರ್ಯಕ್ರಮಗಳಿಂದ ಬಜೆಟ್ ನಲ್ಲಿ ಘೋಷಿಸಲಾಗಿದ್ದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯಾವುದೇ ತೊಂದರೆ ಆಗಲ್ಲ ಎಂದಿದ್ದಾರೆ.
ದೇಶದ ಸಹಕಾರಿ ಬ್ಯಾಂಕುಗಳನ್ನು ರಿಸರ್ವ್ ಬ್ಯಾಂಕ್ ವ್ಯಾಪ್ತಿಯಲ್ಲಿ ತರುವ ಉದ್ದೇಶವಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.