ಶಿರ್ವ ಹೆಚ್ಚಿದ ಕೋವಿಡ್ ಸೋಂಕು: ನಿಯಮ ಉಲ್ಲಂಘಿಸಿದವರಿಗೆ ವಿರುದ್ಧ ಕಾನೂನು ಕ್ರಮದ ಜೊತೆಗೆ ದಂಡ ವಸೂಲು
ಶಿರ್ವ (ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲೆಯಲ್ಲಿ ಐವತ್ತಕ್ಕೂ ಅಧಿಕ ಕೋವಿಡ್ ಸೋಂಕಿತರಿರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಸಿಲ್ ಡೌನ್ ಮಾಡಲಾಗಿದ್ದು, ಕೋವಿಡ್ ಇನ್ನಷ್ಟು ಹರಡದಂತೆ ಜಿಲ್ಲಾಡಳಿತದ ಜೊತೆಗೆ ಸ್ಥಳೀಯ ಗ್ರಾಮಪಂಚಾಯತ್, ಟಾಸ್ಕ್ ಪೋರ್ಸ್ ಸಮಿತಿ ಮತ್ತು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿವೆ.
ಇವೆಲ್ಲದರ ನಡುವೆ ತುರ್ತು ಸೇವೆಗಳನ್ನು ಹೊರತುಪಡಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮದ ಜೊತೆಗೆ ದಂಡ ವಿಧಿಸಲಾಗುತ್ತಿದೆ. ಜಿಲ್ಲೆಯ ಅತಿ ದೊಡ್ಡ ಗ್ರಾಮ ಪಂಚಾಯತ್ ಗಳಲ್ಲಿ ಒಂದಾಗಿರುವ ಶಿರ್ವ ಗ್ರಾಮ ಪಂಚಾಯತ್ ಸಿಲ್ ಡೌನ್ ಮಾಡಲಾಗಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷ ರಾಮರಾಯ ಪಾಟ್ಕರ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಮಿತಿ, ಕೋವಿಡ್ ಸಂಖ್ಯೆ ಇಳಿಮುಖವಾಗಲು ವಿಶೇಷ ಮುತುವರ್ಜಿ ವಹಿಸಿದೆ.
ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕ್ಷಿಪ್ತ ಕಾರ್ಯಾಚರಣೆ ನಡೆಸಿದ ಗ್ರಾಮಪಂಚಾಯತ್ ಟಾಸ್ಕ್ ಪೋರ್ಸ್ ಸಮಿತಿ ಮತ್ತು ಪೊಲೀಸ್ ಇಲಾಖೆ, ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಂಡಿದೆ. ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ ಸಂಚಾರವಾಗುವ ಪ್ರಮುಖ 2 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಟಾಸ್ಕ್ ಪೋರ್ಸ್ ಸಮಿತಿ, ತುರ್ತು ಮತ್ತು ಉದ್ಯೋಗಕ್ಕೆ ತೆರಳುವವರಿಗೆ ಮಾತ್ರ ಗ್ರಾಮದಿಂದ ಹೊರಹೋಗಲು ಅವಕಾಶ ನೀಡಿದೆ.
ಅನಗತ್ಯ ತಿರುಗಾಟ ಮಾಡುವವರಿಗೆ ದಂಡ ವಿಧಿಸಿದ್ದು ಮಾತ್ರವಲ್ಲದೆ, ಹಿಂದಕ್ಕೆ ಕಳಿಸುವ ಕೆಲಸವನ್ನು ಮಾಡಿದೆ. ನಿಯಮ ಉಲ್ಲಂಘಿಸಿದ ಅಂಗಡಿ ಮಾಲಕರೋರ್ವರಿಗೆ ದಂಡ ವಿಧಿಸಿದ ಘಟನೆಯೂ ನಡೆದಿದೆ. ಮಾತ್ರವಲ್ಲದೆ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷ ರಾಮರಾಯ ಪಾಟ್ಕರ್ ಮತ್ತು ಪ್ರಮುಖರು ಸಾರ್ವಜನಿಕರಲ್ಲಿ ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಗ್ರಾಮಕರಣಿಕ ವಿಜಯ್, ಪಿಡಿಒ ಪದ್ಮನಾಭ ನಾಯಕ್, ಆಶಾ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಪೊಲೀಸ್ ಇಲಾಖೆ ಸಹಕರಿಸಿದರು.