ಶಿರ್ವ: ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರ
ಶಿರ್ವ: ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಕೋಡು ಶ್ರೀ ದುರ್ಗಾಂಬಿಕಾ ಅಂಗನವಾಡಿಯಲ್ಲಿ ಆಯೋಜಿಸಲಾಗಿತ್ತು.
ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿಶಾ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲೀನಾ, ಕಿರಿಯ ಪ್ರಯೋಗಶಾಲಾ ತಂತ್ರಜ್ಞ ಸುರೇಶ್, ಅಮಿತಾ ಹಾಗೂ ಫಿಸಿಯೋಥೆರಪಿಸ್ಟ್ ಜೋಯಲ್ ಅವರು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಉಚಿತ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಿದರು.
ಆರೋಗ್ಯಾಧಿಕಾರಿ ಡಾ.ನಿಶಾ ಹಾಗೂ ಆರೋಗ್ಯ ಸುರಕ್ಷಾಧಿಕಾರಿ ಲೀನಾ ಅವರು ಆರೋಗ್ಯದ ಕುರಿತಾಗಿ ಮಾಹಿತಿ ನೀಡಿದರು. ಇದರೊಂದಿಗೆ ಡೆಂಗೀ ಹಾಗೂ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಮಾಹಿತಿಯನ್ನು ನೀಡಲಾಯಿತು. ಶಿರ್ವ ಗ್ರಾಮ ಮಟ್ಟದ ಶೃಂಗಾರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಒಕ್ಕೂಟದ ಸದಸ್ಯರು ಇಂತಹ ಆರೋಗ್ಯ ಶಿಬಿರಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ವೈದ್ಯರ ಸಲಹೆಗಳನ್ನು ಪಡೆಯುವುದರ ಮೂಲಕ ಶಿಬಿರದ ಪ್ರಯೋಜನವನ್ನು ಪಡೆಯಬೇಕು. ಕೇವಲ ಉಳಿತಾಯ ಮತ್ತು ಸಾಲ ಇವಿಷ್ಟೇ ಸ್ವಸಹಾಯ ಸಂಘಗಳ ಉದ್ಧೇಶವಾಗಿರದೇ ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಒಕ್ಕೂಟದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ವೀಣಾವತಿ, ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ಅನಸೂಯಾ, ಅಂಗನವಾಡಿ ಕಾರ್ಯಕರ್ತೆ ಉಷಾ ಮುಂತಾದವರು ಉಪಸ್ಥಿತರಿದ್ದರು.