ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಜೂ.18 ರಂದು ಐಎಂಎಯಿಂದ ದೇಶವ್ಯಾಪಿ ಪ್ರತಿಭಟನೆ

ನವದೆಹಲಿ: ಕೊರೋನಾ ಸಂಕಷ್ಟದಲ್ಲಿ ದೇಶದ ವಿವಿಧ ಭಾಗಗಳಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಜೂ.18 ರಂದು ದೇಶವ್ಯಾಪಿ ಪ್ರತಿಭಟನೆಗೆ ಐಎಂಎ ಕರೆ ನೀಡಿದೆ. 

ರಕ್ಷಕರನ್ನು ರಕ್ಷಿಸಿ ಎಂಬ ಘೋಷ ವಾಕ್ಯದ ಅಡಿಯಲ್ಲಿ ದೇಶವ್ಯಾಪಿ ಪ್ರತಿಭಟನೆ ನಡೆಯಲಿದೆ. ಐಎಂಎಯಿಂದ ನೀಡಲಾಗಿರುವ ಹೇಳಿಕೆಯ ಪ್ರಕಾರ ರಾಜ್ಯ, ಸ್ಥಳೀಯ ಮಟ್ಟದಲ್ಲಿ ತನ್ನ ಸಂಘಟನೆಗಳಿಗೆ  ಸೂಚನೆ ನೀಡಲಾಗಿದ್ದು, ಕಪ್ಪು ಬ್ಯಾಡ್ಜ್, ಮಾಸ್ಕ್, ರಿಬ್ಬನ್, ಶರ್ಟ್ ನ್ನು ಧರಿಸಿ, ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಲ್ಲೆಯ ಬಗ್ಗೆ ಅರಿವು ಅಭಿಯಾನ ಮೂಡಿಸುವ ಮೂಲಕ ವೈದ್ಯರು ಪ್ರತಿಭಟನೆ ನಡೆಸುವಂತೆ ಕರೆ ನೀಡಲಾಗಿದೆ. 

ಈ ಸಂಬಂಧ ಐಎಂಎ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದು, ಸ್ಥಳೀಯ ಎನ್ ಜಿಒ ಗಳು, ಸ್ವಯಂ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಯಕರನ್ನೂ ಭೇಟಿ ಮಾಡುವುದಾಗಿ ತಿಳಿಸಿದೆ. ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ ಹಾಗೂ ಇತರ ಪ್ರದೇಶಗಳಲ್ಲಿ ಕಳೆದ 2 ವಾರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದು ಅತ್ಯಂತ ಆತಂಕಕಾರಿಯಾಗಿದೆ. 

ಆಸ್ಪತ್ರೆ ಹಾಗೂ ಅರೋಗ್ಯ ಸೇವೆ  ವೃತ್ತಿಪರರ ಸಂರಕ್ಷಣಾ ಕಾಯ್ದೆ ಐಪಿಸಿ ಮತ್ತು ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ (ಸಿಆರ್ಪಿಸಿ) ಯನ್ನು ಜಾರಿಗೆ ತರಬೇಕೆಂದು ಐಎಂಎ ಆಗ್ರಹಿಸಿದ್ದು, ಆಸ್ಪತ್ರೆಗಳನ್ನು ಸಂರಕ್ಷಿತ ವಲಯಗಳೆಂದು ಘೋಷಿಸಬೇಕೆಂದೂ ಹೇಳಿದೆ. 

ಜೂ.15 ನ್ನು ರಾಷ್ಟ್ರೀಯ ಬೇಡಿಕೆ ದಿನ ಎಂದು ಆಚರಿಸಲು ಐಎಂಎ ನಿರ್ಧರಿಸಿದ್ದು, ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಲ್ಲೆ ವಿಷಯವಾಗಿ ದೇಶಾದ್ಯಂತ ಸುದ್ದಿಗೋಷ್ಠಿ ನಡೆಸಲಿದೆ. 

ಇದೇ ವೇಳೆ ಅಲೋಪತಿಗೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮ್ ದೇವ್ ಅವರ ಹೇಳಿಕೆ ಬಗ್ಗೆಯೂ ಐಎಂಎ ಪ್ರತಿಕ್ರಿಯೆ ನೀಡಿದ್ದು, “ಬಾಬಾ ರಾಮ್ ದೇವ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಸಮರ ಚಾಲ್ತಿಯಲ್ಲಿದೆ” ಎಂದು ಹೇಳಿದೆ.  

“ಬಾಬಾ ರಾಮ್ ದೇವ್ ಸಾರ್ವಜನಿಕವಾಗಿ ಹೊಸ ಹೇಳಿಕೆಯನ್ನು ನೀಡಿದ್ದು, “ವೈದ್ಯರು ದೇವದೂತರೆಂದು” ಬಣ್ಣಿಸಿದ್ದಾರೆ. ಅಂತೆಯೇ ತಾವೂ ಲಸಿಕೆ ಹಾಕಿಸಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಅವರು ತಮ್ಮ ಹೇಳಿಕೆ ಮೂಲಕ ನಮಗೆ ಮಾನಸಿಕವಾಗಿ ಕಿರುಕುಳ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ” ಎಂದು ಐಎಂಎ ಹೇಳಿದೆ. 

Leave a Reply

Your email address will not be published. Required fields are marked *

error: Content is protected !!