ವರ್ಷಾಂತ್ಯಕ್ಕೆ ಗ್ರಾಮ ಪಂಚಾಯತ್ ಚುನಾವಣೆ ಸಾಧ್ಯತೆ
ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ವರ್ಷಾಂತ್ಯಕ್ಕೆ ಗ್ರಾಮ ಪಂಚಾಯತ್ ಚುನಾವಣೆ ನಡೆಸುವ ಸಾಧ್ಯತೆಯಿದೆ. ಕೇಂದ್ರ ಚುನಾವಣಾ ಆಯೋಗ ಹೊರಡಿಸಿರುವ ಹೊಸ ಮಾರ್ಗಸೂಚಿಗಳಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಆಯೋಗ ಚುನಾವಣೆ ನಡೆಸಲಿದೆ.
ರಾಜ್ಯದಲ್ಲಿ 6025 ಗ್ರಾಮ ಪಂಚಾಯತ್ ಗಳಿದ್ದು, ಅವುಗಳ ಅವಧಿ ಜೂನ್/ ಜುಲೈ ತಿಂಗಳಿಗೆ ಅಂತ್ಯವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅಸಾಧಾರಣ ಸಂದರ್ಭ ಎಂದು ಭಾವಿಸಿ ರಾಜ್ಯ ಚುನಾವಣಾ ಆಯೋಗ ಪಂಚಾಯತ್ ಚುನಾವಣೆಯನ್ನು ಮೇ ತಿಂಗಳಲ್ಲಿ ಮುಂದೂಡಿತ್ತು.
ಈ ಮಧ್ಯೆ ಚುನಾವಣೆ ಮುಂದೂಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಗ್ರಾಮ ಪಂಚಾಯತ್ ಚುನಾವಣೆಗಾಗಿ 21 ಜಿಲ್ಲೆಗಳಲ್ಲಿ ಮೀಸಲಾತಿ ಪಟ್ಟಿ ಸಿದ್ಧವಾಗಿರುವುದಾಗಿ ರಾಜ್ಯ ಚುನಾವಣಾ ಆಯೋಗ ಇತ್ತೀಚಿಗೆ ಹೈಕೋರ್ಟ್ ಗೆ ಮಾಹಿತಿ ನೀಡಿತ್ತು. ಉಳಿದಿರುವ 9 ಜಿಲ್ಲೆಗಳ ಮೀಸಲಾತಿ ಪಟ್ಟಿಗಾಗಿ ಸಮಯವನ್ನು ಕೋರಿತ್ತು.
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಚುನಾವಣೆ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.ಕೋವಿಡ್-19 ಸಂದರ್ಭದಲ್ಲಿ ಚುನಾವಣೆಗಾಗಿ ಆಯೋಗ ಮಾರ್ಗಸೂಚಿಗಳನ್ನು ಹೊರಡಿಸಿದೆ.ಇದರ ಆಧಾರದ ಮೇಲೆ ಮಾರ್ಗಸೂಚಿಗಳನ್ನು ರೂಪಿಸುತ್ತೇವೆ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯ ಚುನಾವಣಾ ಆಯುಕ್ತ ಬಿ. ಬಸವರಾಜು ತಿಳಿಸಿದ್ದಾರೆ.
ಮತದಾನ ನಡೆಯುವ ಕಡೆಗಳಲ್ಲಿ ಸುರಕ್ಷತೆಯನ್ನು ಕೈಗೊಳ್ಳಬೇಕಾಗಿದ್ದು, ಹಣದ ಅಗತ್ಯವಿದೆ.ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸದ್ಯದಲ್ಲಿಯೇ ಪತ್ರ ಬರೆಯಲಾಗುವುದು, ಪ್ರತಿಮತಗಟ್ಟೆಗೆ ಇಂತಿಷ್ಟು ಎಂಬಂತೆ ಮತದಾರರ ಪ್ರಮಾಣವನ್ನು ನಿರ್ಬಂಧಿಸಬೇಕಾಗಿದೆ. ಚುನಾವಣಾ ಸಿದ್ದತೆ ಕುರಿತಂತೆ ಸಂಬಂಧಿತ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಅವರು ಹೇಳಿದ್ದಾರೆ.
ಮತದಾರರ ಪಟ್ಟಿ ಕೂಡಾ ಸಿದ್ಧವಾಗಿದ್ದು, ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಅದು ಪೂರ್ಣಗೊಳ್ಳಲು ಎರಡು ತಿಂಗಳು ಬೇಕಾಗಲಿದ್ದು, ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಯುವ ಭರವಸೆ ಇರುವುದಾಗಿ ಬಸವರಾಜ್ ತಿಳಿಸಿದ್ದಾರೆ.