ರಿಕ್ರಿಯೇಷನ್ ಕ್ಲಬ್‍ಗಳು, ಸಂಘ ಸಂಸ್ಥೆಗಳ ಮನೋರಂಜನಾ ಚಟುವಟಿಕೆಗೆ ಪೊಲೀಸ್ ಅನುಮತಿ ಬೇಕಾಗಿಲ್ಲ: ಹೈಕೋರ್ಟ್
ಮೈಸೂರು ಡಿ.21 : ರಿಕ್ರಿಯೇಷನ್ ಕ್ಲಬ್‍ಗಳು ಅಥವಾ ಸಂಘ ಸಂಸ್ಥೆಗಳು ತಮ್ಮ ಮನೋರಂಜನಾ ಚಟುವಟಿಕೆ ನಡೆಸಲು ಪೊಲೀಸ್ ಅನುಮತಿ ಪಡೆಯಬೇಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಮೈಸೂರಿನ ಸೀರಗಳ್ಳಿ ಲಕ್ಷ್ಮಿದೇವಿ ರಿಕ್ರಿಯೇಷನ್ ಕ್ಲಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‍ನ ನ್ಯಾ. ಕೆಎಸ್ ಹೇಮಲೇಖಾ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿ, ಪ್ರಸಕ್ತ ಕಾನೂನಿನ ಅನ್ವಯ ಯಾವುದೇ ಕ್ಲಬ್ ಅಥವಾ ಸಂಘ-ಸಂಸ್ಥೆಯು ಮನರಂಜನಾ ಚಟುವಟಿಕೆ ನಡೆಸಲು ಯಾವುದೇ ಅನುಮತಿ ಅಥವಾ ಲೈಸನ್ಸ್ ಪಡೆಯಬೇಕಾಗಿಲ್ಲ. ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಲೈಸನ್ಸ್ ಪಡೆಯುವಂತೆ ಸೂಚಿಸುವುದು ಸ್ಟೇಚ್ಛಾಚಾರದ, ತರ್ಕಹೀನ ಕ್ರಮ. ಇಂತಹ ಕಾರ್ಯಕ್ರಮಗಳಿಗೆ ಪೊಲೀಸರು ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ.
ಹಾಗೂ ಕ್ಲಬ್‍ಗಳು ತನ್ನ ಸಂಘದ ಸದಸ್ಯರಿಗೆ ಸೀಮಿತವಾಗಿ ಮಾತ್ರ ಮನರಂಜನಾ ಚಟುವಟಿಕೆ ನಡೆಸುವ ಸಂಸ್ಥೆಯಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಶುಲ್ಕ ಪಡೆದೋ ಅಥವಾ ಉಚಿತವಾಗಿಯೋ ಸಾರ್ವಜನಿಕರು ಪ್ರವೇಶ ಪಡೆಯುವಂತಿಲ್ಲ. ಬೈಲಾ ಪ್ರಕಾರ ಕಾರ್ಯಕ್ರಮಕ್ಕೆ ಪ್ರವೇಶ ನಿರ್ಬಂಧಿತವಾಗಿದ್ದು, ಕ್ಲಬ್ ಸದಸ್ಯರಿಗೆ ಮಾತ್ರ ಪ್ರವೇಶವಿರಲಿದೆ ಎಂದು ಸೂಚನೆ ನೀಡಿದೆ.