ರಾಷ್ಟ್ರಪಿತ ಮಹಾತ್ಮ ಗಾಂಧಿಯ ಅವಹೇಳನ- ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ವಿರುದ್ಧ ಎಫ್ಐಆರ್
ರಾಯ್ಪುರ್, ಡಿ.27: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿ ಭಾಷಣ ಮಾಡಿದ ಆರೋಪದ ಮೇಲೆ ಹಿಂದೂ ಧಾರ್ಮಿಕ ಮುಖಂಡ, ಆಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್ ವಿರುದ್ಧ ಛತ್ತೀಸ್ಗಢ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ ಪ್ರಮೋದ್ ದುಬೆ ಅವರು ನೀಡಿದ ದೂರಿನಂತೆ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ನಿನ್ನೆ ಸಂಜೆ ರಾಯ್ ಪುರ್ ನ ರಾವಣ ಭಟ ಮೈದಾನದಲ್ಲಿ ನಡೆದ ಎರಡು ದಿನಗಳ ಧರ್ಮ ಸಂಸದ್ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಆಧ್ಯಾತ್ಮಿಕ ಚಿಂತಕ ಕಾಳಿಚರಣ್ ಮಹಾರಾಜ್, ರಾಷ್ಟ್ರಪಿತನ ವಿರುದ್ಧ ನಿಂದನೀಯ ಪದವನ್ನು ಬಳಸಿದ್ದ ಹಿಂದೂ ನಾಯಕನನ್ನು ರಾಷ್ಟ್ರದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುವಂತೆ ಕೇಳಿಕೊಂಡಿದ್ದರು. ಮಾತ್ರವಲ್ಲದೆ ” ಇಸ್ಲಾಂ ಧರ್ಮದ ಪ್ರಮುಖ ಗುರಿ ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದಾಗಿದೆ. ಅವರು ನಮ್ಮ ಕಣ್ಣ ಮುಂದೆಯೇ 1947 ರಲ್ಲಿ (ವಿಭಜನೆಯನ್ನು ಉಲ್ಲೇಖಿಸಿ) ವಶಪಡಿಸಿಕೊಂಡರು. ಅದಕ್ಕೂ ಮೊದಲು ಇರಾನ್, ಇರಾಕ್ ಮತ್ತು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡರು, ಮಾತ್ರವಲ್ಲದೆ ರಾಜಕೀಯದ ಮೂಲಕ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ವಶಪಡಿಸಿಕೊಂಡರು. ಹೀಗಾಗಿ ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನಾನು ನಮಸ್ಕರಿಸುತ್ತೇನೆ” ಎಂದು ಹೇಳಿದ್ದರು.