ರಾಜ್ಯಪಾಲರಿಂದ ಭ್ರಷ್ಟಾಚಾರ ಆರೋಪಿಗಳ ರಕ್ಷಣೆ- ವಿ.ಎಸ್‌.ಉಗ್ರಪ್ಪ ಆರೋಪ

ಬೆಂಗಳೂರು ಜು.2: ರಾಜ್ಯಪಾಲರಿಂದ ಭ್ರಷ್ಟಾಚಾರ ಆರೋಪಿಗಳ ರಕ್ಷಣೆಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ  ವಿ.ಎಸ್‌. ಉಗ್ರಪ್ಪ ಆರೋಪಿಸಿದ್ದಾರೆ.

ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯಪಾಲ ವಜುಭಾಯಿ ವಾಲಾ ಅವರು ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಹುಮಹಡಿ ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರನಿಂದ ಯಡಿಯೂರಪ್ಪ ಅವರ ಮಗ ಮತ್ತು ಮೊಮ್ಮಗ ₹ 25 ಕೋಟಿ ಲಂಚ ಪಡೆದಿದ್ದಾರೆ. ಈ ಕುರಿತು ವಿಚಾರಣೆಗೆ ಅನುಮತಿ ನಿರಾಕರಿಸುವ ಮೂಲಕ ರಾಜ್ಯಪಾಲರು ಆರೋಪಿಗಳನ್ನು ರಕ್ಷಿಸಿದ್ದಾರೆ’ ಎಂದು ದೂರಿದರು ಇದೇ ವೇಳೆ ಶೆಲ್‌’ ಕಂಪನಿಗಳನ್ನು ಸೃಷ್ಟಿಸಿ ಹಣ ಪಡೆದಿರುವುದಕ್ಕೆ ದಾಖಲೆಗಳಿವೆ ಎಂದ ಅವರು, ಈ ವಿಚಾರವಾಗಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿರುವ ಟಿ.ಜೆ. ಅಬ್ರಹಾಂ, ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರು.

ನಿಯಮದ ಪ್ರಕಾರ, ನಾಲ್ಕು ತಿಂಗಳೊಳಗೆ ರಾಜ್ಯಪಾಲರು ನಿರ್ಧಾರ ಕೈಗೊಳ್ಳಬೇಕಿತ್ತು. ಏಳೂವರೆ ತಿಂಗಳ ಬಳಿಕ ಅಬ್ರಹಾಂ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ.‌ ರಾಜ್ಯಪಾಲರು ತಮ್ಮ ನಿರ್ಧಾರವನ್ನು ಅರ್ಜಿದಾರರಿಗೆ ತಿಳಿಸಬೇಕಿತ್ತು. ಆದರೆ, ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿಗೆ ತಿಳಿಸಿದ್ದಾರೆ. ರಾಜ್ಯಪಾಲರ ಕಚೇರಿ ಅಥವಾ ಮುಖ್ಯಮಂತ್ರಿಯವರ ಕಚೇರಿಯಿಂದ ಅಧಿಕಾರ ದುರ್ಬಳಕೆ ಆಗಿರುವ ಸಂಶಯವಿದೆ ಎಂದು ಹೇಳಿದರು.

ಈ ವೇಳೆ ಮಾತು ಮುಂದುವರೆಸಿದ ಅವರು, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರ ಒಬ್ಬ ಆಪ್ತ ಸಹಾಯಕ ಕೆಲವು ತಿಂಗಳ ಹಿಂದೆ ನಿಗೂಢವಾಗಿ ಮೃತಪಟ್ಟಿದ್ದರು. ಈಗ ರಾಜಣ್ಣ ಎಂಬ ಆಪ್ತ ಸಹಾಯಕನನ್ನು ಮುಖ್ಯಮಂತ್ರಿಯವರ ಮಗ ಬಿ.ವೈ. ವಿಜಯೇಂದ್ರ ದೂರು ನೀಡಿ, ಬಂಧನ ಮಾಡಿಸಿದ್ದಾರೆ. ಕೆಲವರ ತಪ್ಪು ಮುಚ್ಚಿಹಾಕಲು ನಡೆಸುತ್ತಿರುವ ಪ್ರಯತ್ನ ಇದು ಎಂದು ಅವರು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!