ರಾಜ್ಯದಲ್ಲಿ ಮತ್ತೊಂದು ಸುತ್ತಿನ ಆಪರೇಷನ್‌ ಕಮಲ: ದಿನೇಶ್‌ ಗುಂಡೂ ರಾವ್‌

ಬೆಂಗಳೂರು: ‘ವಿರೋಧ ಪಕ್ಷಗಳ ಶಾಸಕರನ್ನು ಸಂಪರ್ಕಿಸುವ ಮೂಲಕ ಬಿಜೆಪಿಯು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಆಪರೇಷನ್‌ ಕಮಲಕ್ಕೆ ಕೈ ಹಾಕಿದೆ,’ ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್‌ ಗುಂಡೂರಾವ್‌, ‘ಬಿಜೆಪಿಗೆ ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ ನಮ್ಮ ಶಾಸಕರನ್ನು ಸಂಪರ್ಕಿಸುತ್ತಿದೆ. ಬಿಜೆಪಿ ಸಂಪರ್ಕ ಮಾಡುತ್ತಿರುವ ವಿಚಾರವನ್ನು ಶಾಸಕರು ನಮ್ಮ ಗಮನಕ್ಕೆ ತಂದಿದ್ದಾರೆ,’ ಎಂದು ದಿನೇಶ್‌ ಅವರು ಹೇಳಿದ್ದಾರೆ.  

‘ಬಿಜೆಪಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ನೀವೇನಾದರೂ ಮತ್ತೊಂದು ಸುತ್ತಿನ ಆಪರೇಷನ್‌ ಕಮಲ ನಡೆಸಿದರೆ ಜನ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಬೀದಿ ಬೀದಿಯಲ್ಲಿ ನಿಮ್ಮನ್ನು ಅಟ್ಟಾಡಿಸಿ ಬರುತ್ತಾರೆ. ಚುನಾವಣೆ ನಂತರವೂ ಬಿಜೆಪಿಗೆ ಬಹುಮತ ಬರುವುದಿಲ್ಲ ಎಂದೂ ದಿನೇಶ್‌ ಭವಿಷ್ಯ ನುಡಿದಿದ್ದಾರೆ.

ಯಶವಂತಪುರ ಶಾಸಕ ಎಸ್‌.ಟಿ ಸೋಮಶೇಖರ್‌, ಕೆ.ಆರ್‌.ಪುರದ ಬೈರತಿ ಬಸವರಾಜು ಮತ್ತು ರಾಜರಾಜೇಶ್ವರಿ ನಗರದ ಮುನಿರತ್ನ ಅವರು ಮತ್ತೆ ಕಾಂಗ್ರೆಸ್‌ಗೆ ಬರಲು ಬಯಸಿದ್ದರು. ಆದರೆ, ಅವರ ಕೋರಿಕೆಯನ್ನು ಕಾಂಗ್ರೆಸ್‌ ತಿರಸ್ಕರಿಸಿದೆ ಎಂದೂ ಅವರು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!