ಮೌನ ಮುರಿದು ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಿ: ಮೋದಿಗೆ ರಾಹುಲ್ ಗಾಂಧಿ ಒತ್ತಾಯ
ನವದೆಹಲಿ: ‘ಅಟಲ್ ಟನಲ್’ ನಲ್ಲಿ ಕೈಬೀಸಿದ ದೃಶ್ಯಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶದ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹತ್ರಾಸ್ ಸಾಮೂಹಿಕ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ರಾಹುಲ್ ಗಾಂಧಿ, ’ಪ್ರಧಾನಿಯವರೇ ಸುರಂಗದಲ್ಲಿ ಮಾತ್ರ ಕೈ ಬೀಸುವುದನ್ನು ನಿಲ್ಲಿಸಿ. ಗಂಭೀರ ಸಮಸ್ಯೆಗಳ ಬಗ್ಗೆ ಮೌನ ಮುರಿದು ಮಾತನಾಡಿ. ದೇಶದ ಜನ ಕೇಳುವ ಪ್ರಶ್ನೆಗಳನ್ನು ಎದುರಿಸಿ. ದೇಶ ನಿಮಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿದೆ’ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೌನವಾಗಿದ್ದಾರೆಂದು ರಾಹುಲ್ ಗಾಂಧಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
ಇದಕ್ಕು ಮುನ್ನ, ಲಡಾಖ್ ಗಡಿಯಲ್ಲಿ ಸುಮಾರು 1,200 ಚ.ಕಿ.ಮೀ ಪ್ರದೇಶದಲ್ಲಿ ಚೀನಾ ಅತಿಕ್ರಮಣ ಮಾಡಿದೆ. ಆದರೆ ನಮ್ಮ ಹೇಡಿ ಪ್ರಧಾನಿ ಒಂದಿಂಚು ಭೂಮಿಯನ್ನೂ ಯಾರೂ ಅತಿಕ್ರಮಿಸಿಕೊಂಡಿಲ್ಲ ಎಂದು ಸುಳ್ಳು ಹೇಳುವ ಮೂಲಕ ಜನರಿಗೆ ಮೋಸ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದರು.