ಮುಜರಾಯಿ ದೇಗುಲಗಳ ಅಭಿವೃದ್ಧಿಗೆ ಡಿ.ಸಿ.ಅಧಿಕಾರ 1ಕೋಟಿ ರೂ.:ಕೋಟ ಶ್ರೀನಿವಾಸ

ಉಡುಪಿ : ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಡುವ ದೇವಸ್ಥಾನಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ
ಸಂಬಂದಿಸಿದಂತೆ ಜಿಲ್ಲಾಧಿಕಾರಿಗಳಿಗೆ ರೂ. 1 ಕೋಟಿ ವರೆಗೆ ಮಂಜೂರಾತಿ ಅಧಿಕಾರ ನೀಡುವ ಪ್ರಸ್ತಾವನೆ ರಾಜ್ಯ ಸರಕಾರದ ಮುಂದೆ ಇದೆ ಎಂದು ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಮಂಗಳವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ವಿವಿಧ
ಕಾಮಗಾರಿ ಹಾಗೂ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇಗುಲಗಳಲ್ಲಿ ಪ್ರಸಕ್ತ ರೂ. 50ಲಕ್ಷದವರೆಗಿನ ಯೋಜನೆಗಳಿಗೆ ಮಂಜೂರಾತಿ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇದೆ. ಇದನ್ನು ಒಂದು ಕೋಟಿ ರೂಪಾಯಿಗೆ ಏರಿಕೆ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಸಚಿವ ಸಂಪುಟದ ಮುಂದೆ ಇದು ಬರಲಿದೆ.

ಇದರಿಂದ ಪ್ರಮುಖ ದೇವಸ್ಥಾನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ
ಕೈಗೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು. ಕೊಲ್ಲೂರಿನಲ್ಲಿ ಒಳಚರಂಡಿ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣ ಸಂಬಂಧ ಶೀಘ್ರವೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಬಂಧಪಟ್ಟವರ ಸಭೆ ಕರೆದು ತೀರ್ಮಾನಿಸಲಾಗುವುದು.
ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಸ್ಥಳೀಯ ನಾಗರೀಕರನ್ನೂ ವಿಶ್ವಾಸಕ್ಕೆ
ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಕೊಲ್ಲೂರಿನಲ್ಲಿ ವಿಶಾಲವಾದ ಗೋಶಾಲೆ ನಿರ್ಮಿಸಲು ಸೂಕ್ತ ಜಮೀನು ಮಂಜೂರಾತಿ ಸಂಬಂಧ
ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲು ಸೂಚಿಸಿದ ಸಚಿವರು, ಜಮೀನು ಲಭ್ಯವಿಲ್ಲದಿದ್ದಲ್ಲಿ ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಅರಣ್ಯ ಜಾಗ ಬಳಸುವ ಬಗ್ಗೆ ಆ ಇಲಾಖೆಯೊಂದಿಗೆ ವ್ಯವಹರಿಸಲು ತಿಳಿಸಿದರು. ಹಬ್ಬ ಹರಿದಿನಗಳಲ್ಲಿ ಕೊಲ್ಲೂರಿನಲ್ಲಿ ವಾಹನಗಳ ಪಾರ್ಕಿಂಗ್‍ಗೆ ಸ್ಥಳಾವಕಾಶ ಕೊರತೆಯುಂಟಾಗುತಿರುವ ಬಗ್ಗೆ ತನ್ನ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ವಿಶಾಲವಾದ ಪಾರ್ಕಿಂಗ್ ತಾಣ ನಿರ್ಮಿಸುವ ಸಂಬಂಧ ಜಾಗ ಗುರುತಿಸಲು ದೇವಸ್ಥಾನ ಆಡಳಿತ ಮಂಡಳಿಗೆ ನಿರ್ದೇಶಿಸಿದರು.

ಕೊಲ್ಲೂರು ಸರಕಾರಿ ಆಸ್ಪತ್ರೆಗೆ ಶೀಘ್ರವೇ ಪೂರ್ಣಪ್ರಮಾಣದ ವೈದ್ಯರನ್ನು ನೇಮಿಸಲಾಗುವುದು ಎಂದರು. ಭಕ್ತಾಧಿಗಳಿಂದ ದೇಣಿಗೆ ಸಂಗ್ರಹಿಸುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಿಣಗೊಳಿಸಬೇಕು. ಇದರಲ್ಲಿ ಯಾವುದೇ ಸಾಫ್ಟ್‍ವೇರ್ ಸಮಸ್ಯೆ ಎದುರಾಗದಂತೆ ತಂತ್ರಜ್ಞರ ನೆರವು ಪಡೆಯಲು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು. ಕೊಲ್ಲೂರು ದೇವಸ್ಥಾನದ ಆನೆಯ ಸಂಶಯಾಸ್ಪದ ಸಾವಿನ ಬಗ್ಗೆ ಮರಣೋತ್ತರ ವರದಿ ಬಂದ ಬಳಿಕ ನಿರ್ಧರಿಸಲಾಗುವುದು.
ಕೊಲ್ಲೂರು ಪರಿಸರದ ವಸತಿಗೃಹಗಳ ಕೊಳಚೆ ನೀರು ನದಿಗೆ ನೇರವಾಗಿ ಬಿಡುತ್ತಿರುವ ವರದಿಗಳ ಬಗ್ಗೆ ಕೂಡಲೇ ಗಮನಹರಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ದೇವಸ್ಥಾನದ ಆಡಳಿತ ವತಿಯಿಂದ ನಡೆಸುತ್ತಿರುವ ಶಾಲೆಗಳ ಶಿಕ್ಷಕರಿಗೆ ಸರಕಾರದ ಅನುದಾನದಿಂದ ವೇತನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಕೊಲ್ಲೂರು ದೇಗುಲದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ದೇಗುಲದಲ್ಲಿ ರೂ. 21 ಕೋಟಿ ವೆಚ್ಚದಲ್ಲಿ ನೂತನ ಭೋಜನಶಾಲೆ ಕಟ್ಟಡ ನಿರ್ಮಾಣ, ರೂ. 33.40 ಕೋಟಿ ವೆಚ್ಚದಲ್ಲಿ ಕ್ಷೇತ್ರಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆ, ರೂ. 19.97 ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆ ಮತ್ತಿತರ ಕಾಮಗಾರಿಗಳು ಪ್ರಗತಿಯಲ್ಲಿವೆ. 2018-19ರಲ್ಲಿ ಕೊಲ್ಲೂರು ದೇವಸ್ಥಾನಕ್ಕೆ ರೂ. 41.79 ಕೋಟಿ ಆದಾಯ ಬಂದಿದ್ದು, ರೂ. 5.33 ಕೋಟಿ ಸಿಬ್ಬಂದಿ ವೆಚ್ಚವಾಗಿರುತ್ತದೆ. ಒಟ್ಟು 167 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಪ್ರವೀಣ್ ಕುಮಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!