ಮಂದಿರ ಮಸೀದಿಗಳಿಗಿಂತಲೂ ಪವಿತ್ರವಾದದ್ದು ಮನುಷ್ಯನ ಜೀವ:ಯಾಸೀನ್ ಮಲ್ಪೆ
ಸ್ಥಳೀಯ ಸಮಸ್ಯೆಯಾಗಿದ್ದ ಅಯೋಧ್ಯೆ ವಿವಾದದಲ್ಲಿ ರಾಜಕೀಯ ಪ್ರವೇಶಿಸಿದ ಬಳಿಕ ಅದು ಅನಿವಾರ್ಯವಾಗಿ ರಾಷ್ಟ್ರೀಯ ವಿಷಯವಾಗಿದೆ. ಇಂತಹ ಮಹತ್ವದ ರಾಷ್ಟ್ರ ಮಟ್ಟದ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಲು ಸಮುದಾಯವನ್ನು ಪ್ರತಿನಿಧಿಸುವ ರಾಷ್ಟ್ರ ಮಟ್ಟದ ಸಂಘಟನೆಗಳು, ಒಕ್ಕೂಟಗಳು ಇವೆ. ಅವುಗಳು ಈಗಾಗಲೇ ಅಯೋಧ್ಯೆ ತೀರ್ಪಿನ ಕುರಿತು ತಮ್ಮ ನಿಲುವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿವೆ. ಹಾಗಾಗಿ ಈ ವಿಷಯದ ಕುರಿತು ಪ್ರತಿ ಜಿಲ್ಲೆ , ತಾಲೂಕು ಮಟ್ಟದಲ್ಲಿರುವ ಮುಸ್ಲಿಂ ಸಂಘಟನೆಗಳು ಪ್ರತ್ಯೇಕವಾಗಿ ಯಾವುದೇ ಅಭಿಪ್ರಾಯ ನೀಡುವ ಅಗತ್ಯವಿಲ್ಲ.
ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಏನೇ ಬಂದರೂ ನಾವು ಭಾವನಾತ್ಮಕವಾಗಿ ಪ್ರತಿಕ್ರಿಯಿಸದೆ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಿ ಮುಂದಿನ ಕಾನೂನು ಹೆಜ್ಜೆ ಇಡುತ್ತೇವೆ ಎಂದು ಈಗಾಗಲೇ ಹೇಳಿದ್ದೇವೆ. ಅದೇ ನಿಲುವನ್ನು ಈಗಲೂ ಪುನರುಚ್ಛರಿಸುತ್ತಿದ್ದೇವೆ. ಇದು ಬೀದಿಗಿಳಿದು ಮಾತನಾಡುವ ವಿಷಯವಲ್ಲ ಎಂದು ಮೊದಲೂ ಹೇಳಿದ್ದೇವೆ ಈಗಲೂ ಅದಕ್ಕೆ ಬದ್ಧರಾಗಿದ್ದೇವೆ.
ಎಲ್ಲಕ್ಕಿಂತ ಮುಖ್ಯವಾಗಿ ಮಂದಿರ ಮಸೀದಿಗಳಿಗಿಂತಲೂ ಪವಿತ್ರವಾದದ್ದು ಮತ್ತು ಅಮೂಲ್ಯವಾದದ್ದು ಮನುಷ್ಯನ ಜೀವ. ಈಗಾಗಲೇ ಈ ವಿವಾದದ ಹೆಸರಿನಲ್ಲಿ ಅದೆಷ್ಟೋ ಮಾನವ ಜೀವಗಳನ್ನು ಕಳೆದುಕೊಂಡಿದ್ದೇವೆ. ಇನ್ನಾದರೂ ಅದಕ್ಕೆ ಕಡಿವಾಣ ಬೀಳಬೇಕು. ಈ ನೆಪದಲ್ಲಿ ನಡೆಯುತ್ತಾ ಇರುವ ರಾಜಕೀಯ ಕೊನೆಗೊಳ್ಳಬೇಕು. ಇದನ್ನು ನೆಪವಾಗಿಟ್ಟುಕೊಂಡು ಜಿಲ್ಲೆಯ ಯಾವುದೇ ಸಮುದಾಯಗಳು ಮತ್ತು ಸಂಘಟನೆಗಳು ಸಮಾಜದ ಸ್ವಾಸ್ಥ್ಯಕ್ಕೆ ಭಂಗತರುವ ಕೆಲಸಕ್ಕೆ ಕೈ ಹಾಕದಿರುವಂತೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ವಿನಂತಿಸುತ್ತದೆ.