ಬ್ರಹ್ಮಾವರ: ಲಕ್ಷಾಂತರ ರೂ.ಮೌಲ್ಯದ ಸೊತ್ತು ಖರೀದಿಸಿ ವ್ಯಕ್ತಿಗೆ ವಂಚನೆ
ಬ್ರಹ್ಮಾವರ ಸೆ.11(ಉಡುಪಿ ಟೈಮ್ಸ್ ವರದಿ): ವ್ಯಕ್ತಿಯೊಬ್ಬರ ಬಜಾಜ್ ಫೈನಾನ್ಸ್ ಖಾತೆಯನ್ನು ಬಳಸಿಕೊಂಡು 4.82 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಖರೀದಿಸಿ ವಂಚಿಸಿರುವ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಂದೂರಿನ ಶ್ರೇಯಸ್ ಅವರ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಸಿಟಿ ಸೆಂಟರ್ ನಲ್ಲಿರುವ ಬಜಾಜ್ ಫೈನ್ಯಾನ್ಸ್ ನ ಕಾರ್ಡ್ ಹೆಸರಿನಲ್ಲಿ ಬ್ರಹ್ಮಾವರದ ಸಿಟಿ ಸೆಂಟರ್‌ನಲ್ಲಿರುವ ಹರ್ಷ ಶೋ ರೂಂ ನಿಂದ ಒಟ್ಟು 4,82,700 ರೂ. ಮೌಲ್ಯದ ಟಿವಿ, ಐಫೋನ್, ರೆಫ್ರಿಜಿರೇಟರ್ ಗಳನ್ನು ಸಾಲದ ಕಂತಿನ ರೂಪದಲ್ಲಿ ಖರೀದಿಸಿ ವಂಚಿಸಿದ್ದಾರೆ. ಈ ವಸ್ತುಗಳ ಸಾಲದ ಕಂತಿನ ಹಣ ರೂ. 38,335 ಕಟ್ಟಾದಾಗ ಶ್ರೇಯಸ್ ಅವರಿಗೆ ತಮ್ಮ ಬ್ಯಾಂಕ್ ಖಾತೆ ದುರ್ಬಳಕೆ ಆಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಶ್ರೇಯಸ್ ಅವರ ಬ್ಯಾಂಕ್ ಖಾತೆ ನಂಬರ್ ತಿಳಿದಿರುವ ರಂಜಿತ್ ಅಥವಾ ಬ್ರಹ್ಮಾವರದ ಬಜಾಜ್ ಫೈನ್ಯಾನ್ಸ್ ಹಾಗೂ ಬ್ರಹ್ಮಾವರದ ಸಿಟಿಸೆಂಟರ್‌ನಲ್ಲಿರುವ ಹರ್ಷ ಶೋ ರೂಮ್ ನಲ್ಲಿ ಇರುವ ಯಾರೋ ವ್ಯಕ್ತಿ ಶ್ರೇಯಸ್ ಅವರ ಹೆಸರು ಮತ್ತು ಸಹಿಯನ್ನು ದುರ್ಬಳಕೆ ಮಾಡಿ ಬ್ರಹ್ಮಾವರದ ಬಜಾಜ್ ಫೈನ್ಯಾನ್ಸ್ ನಲ್ಲಿ ಲೋನ್ ಮಾಡಿರುವಂತೆ ನಕಲಿ ದಾಖಲೆ ಸೃಷ್ಟಿಸಿ ಶ್ರೇಯಸ್ ಅವರ ಖಾತೆಯಿಂದ ರೂ. 38,335/- ಹಣವನ್ನು ಕಡಿತಗೊಳ್ಳುವಂತೆ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.