ಪಶ್ಚಿಮ ಬಂಗಾಳದಿಂದ ಕೇವಲ 170 ಕಿ.ಮೀ. ದೂರದಲ್ಲಿದೆ ಸೂಪರ್ ಚಂಡಮಾರುತ ಅಂಫಾನ್!
ಕೋಲ್ಕತಾ: ಈಗಾಗಲೇ ಮಹಾಮಾರಿ ಕೊರೋನಾ ವೈರಸ್ ನಿಂತ ತತ್ತರಿಸಿರುವ ಪಶ್ಚಿಮ ಬಂಗಾಳಕ್ಕೆ ಈಗ ಸೂಪರ್ ಚಂಡಮಾರುತ ಅಂಫಾನ್ ಆಘಾತ ಎದುರಾಗಿದೆ.
ಪಶ್ಚಿಮ ಬಂಗಾಳದ ದಿಘಾದಿಂದ ದಕ್ಷಿಣಕ್ಕೆ ಸುಮಾರು 170 ಕಿ.ಮೀ ದೂರದಲ್ಲಿರುವ ಅಂಫಾನ್ ಚಂಡಮಾರುತವು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿರುವ ಅತ್ಯಂತ ತೀವ್ರವಾದ ಚಂಡಮಾರುತವಾಗಿದೆ. ಅಂಫಾನ್ ಇಂದು ಮಧ್ಯಾಹ್ನದ ನಂತರ ಸುಂದರ್‌ಬನ್ಸ್ ಗೆ ಅಪ್ಪಳಿಸುವ ಸಾಧ್ಯತೆ ಇದೆ.
ಮುನ್ನೆಚ್ಚರಿಕೆ ಕ್ರಮವಾಗಿ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಹಲವು ಗ್ರಾಮಗಳ ಜನರನ್ನು ತಾತ್ಕಾಲಿಕ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಸದ್ಯದಲ್ಲೇ ಒಡಿಶಾಕ್ಕೂ ಅಪ್ಪಳಿಸಲಿರುವ ಈ ಚಂಡಮಾರುತ ತಾನು ಹೋದ ದಾರಿಯಲ್ಲೆಲ್ಲ ಭಾರೀ ಹಾನಿ ಉಂಟು ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಲ್ಲಿ ಸಮರೋಪಾದಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಎರಡೂ ರಾಜ್ಯಗಳಿಂದ 12 ಲಕ್ಷ ಮಂದಿಯನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಬಿರುಸಾದ ಗಾಳಿಯೊಂದಿಗೆ ಗಂಟೆಗೆ ಸುಮಾರು 200 ಕಿ.ಮೀ ವೇಗದೊಂದಿಗೆ ಚಂಡಮಾರುತ ಧಾವಿಸುತ್ತಿದೆ ಎಂದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಎರಡೂ ರಾಜ್ಯಗಳತ್ತ ಸಹಾಯಹಸ್ತ ಚಾಚಿರುವ ಕೇಂದ್ರ ಸರಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‌ಡಿಆರ್‌ಎಫ್)ಯ 41 ತುಕಡಿಗಳನ್ನು ರವಾನಿಸಿದೆ. ಜತೆಗೆ ಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ಕಾವಲು ಪಡೆಯ ತುಕಡಿಗಳನ್ನೂ ಕಳುಹಿಸಿದೆ.