ಆಯ್ಕೆಯಾಗಿರುವುದು ಉಡುಪಿ-ಚಿಕ್ಕಮಗಳೂರಿಗೆ, ಆದ್ರೆ ಕೆಲಸ ಮಾಡ್ತಿರೋದು ಬೆಂಗಳೂರಿಗೆ: ಮತದಾರನ ಆಕ್ರೋಶ
ಉಡುಪಿ-ಚಿಕ್ಕಮಗಳೂರು ಭಾಗದ ಜನರಿಂದ ಆಯ್ಕೆಯಾಗಿ ಲಾಕ್‌ಡೌನ್ ಸಂದರ್ಭ ಬೆಂಗಳೂರಿಗೆ ಸಹಾಯ ಮಾಡಿ ಮತ ಹಾಕಿದ ಜನರನ್ನು ಮರೆತ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಚಿಕ್ಕಮಗಳೂರಿನ ಜನ ಸಾಮಾಜಿಕ ಜಾಲತಾಣದಲ್ಲಿಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೋಟ್ ಕೇಳೋಕೆ ನಮ್ಮ ಮನೆಬಾಗಿಲಿಗೆ ಬರುತ್ತೀರಿ. ಈಗ ರೇಷನ್ ಬ್ಯಾಗಿಗೆ ನಿಮ್ಮ ಫೋಟೋ ಪ್ರಿಂಟ್ ಮಾಡಿಸಿ ಬೆಂಗಳೂರಲ್ಲಿ ಹಂಚುತ್ತಿದ್ದಿರಲ್ಲವೇ ಎಂದು ಪ್ರಶ್ನಿಸಿರುವ ಕಾಫಿನಾಡಿಗರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗರಂ ಆಗಿದ್ದಾರೆ.
ನೀವು ಆಯ್ಕೆಯಾಗಿರುವುದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ. ಆದ್ರೆ ಕೆಲಸ ಮಾಡ್ತಿರೋದು ಅಲ್ಲೆಲ್ಲೋ ಬೆಂಗಳೂರಿಗೆ. ತಾನು ಹೆತ್ತ ಮಕ್ಕಳು ಮನೆಯಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ. ಆದ್ರೂ ತಾಯಿ ಪಕ್ಕದ ಮನೆಯ ಮಕ್ಕಳಿಗೆ ಅನ್ನ ನೀಡೋಕೆ ಹೋಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಮೋದಿ ಎಂಬ ಶಕ್ತಿಗೆ ಜೀವತುಂಬಲು ನಿಮಗೆ ಮತ ಹಾಕಿದ್ದೇವೆ. ಹೊರತು ನಿಮ್ಮ ಕೆಲಸ ಕಾರ್ಯ ನೋಡಿ ಅಲ್ಲವೇ ಅಲ್ಲ ಎಂದು ಶೋಭಾ ಕರಂದ್ಲಾಜೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು ಫೇಸ್ಬುಕಲ್ಲಿ ಪೋಸ್ಟ್ ಮಾಡಿ ನೋವು ತೋಡಿಕೊಂಡಿದ್ದಾರೆ.
ಕೊರೊನಾದಿಂದ ಕೆಲಸಕಾರ್ಯವಿಲ್ಲದೇ ಕ್ಷೇತ್ರದ ಜನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ರೆ ನಮ್ಮ ಸಂಸದರು ಬೆಂಗಳೂರಲ್ಲಿ ಕಿಟ್ ಹಂಚುತ್ತಿದ್ದಾರೆ. ಮುಂದಿನ ಚುನಾವಣೆಗೆ ರೆಡಿಯಾಗುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.