ನಳಿನ್ ಕುಮಾರ್ ಕಟೀಲ್ ರನ್ನು ತರಾಟೆಗೆ ತೆಗೆದುಕೊಂಡ: ಬಿಎಸ್ ವೈ
ಬೆಂಗಳೂರು: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಡೆಗಣಿಸುತ್ತಿರುವ ವಿಚಾರವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಉಭಯ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇದೆ ಎಂಬ ವದಂತಿಗಳ ಬೆನ್ನಲ್ಲೇ ನಳಿನ್ ಕುಮಾರ್ ಅವರು ಗುರುವಾರ ಬೆಳಿಗ್ಗೆ ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿಯಲ್ಲಿರುವ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರನ್ನು ಯಡಿಯೂರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಉಭಯ ನಾಯಕರು ಸುಮಾರು 40 ನಿಮಿಷ ಮಾತುಕತೆ ನಡೆಸಿದ್ದಾರೆ. ಪೂರ್ವ ನಿಗದಿಯಂತೆ ಈ ಮಾತುಕತೆ ಬಳಿಕ ನಳಿನ್ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ, ಯಡಿಯೂರಪ್ಪ ನಿವಾಸದಿಂದ ಹೊರ ಬಂದ ನಳಿನ್ ಸಪ್ಪೆ ಮುಖದೊಂದಿಗೆ, ಪತ್ರಕರ್ತರ ಬಳಿ ಮಾತನಾಡದೆ ನಿರ್ಗಮಿಸಿದರು.
ನೆರೆ ಪರಿಹಾರ ಸೇರಿ ಹಲವು ವಿಷಯ ಚರ್ಚೆ: ಮಾತುಕತೆ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಕೇಂದ್ರದಿಂದ ನೆರೆ ಪರಿಹಾರ ತರುವುದೂ ಸೇರಿ ಹಲವು ವಿಷಯಗಳ ಬಗ್ಗೆ ನಳಿನ್ ಜತೆ ಚರ್ಚೆ ನಡೆಸಲಾಯಿತು ಎಂದರು. ಪಕ್ಷದ ಯಾವ ನಾಯಕರನ್ನೂ ಕೈಬಿಡುವ ಪ್ರಶ್ನೆ ಇಲ್ಲ. ಪಕ್ಷವನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಿದ್ದೇವೆ ಎಂದು ಅವರು ತಿಳಿಸಿದರು.
ಪ್ರಧಾನಿ ದೂಷಣೆ ಬೇಡ: ನೆರೆ ಪರಿಹಾರ ನೀಡಿಲ್ಲ ಎಂದು ಪ್ರಧಾನಿ ಅವರನ್ನು ದೂಷಿಸುವ ಅಗತ್ಯ ಇಲ್ಲ. ಕೇಂದ್ರದ ನೆರವು ವಿಳಂಬವಾಗಿದ್ದರೂ ನೆರೆ ಪರಿಹಾರವನ್ನು ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಸರ್ಕಾರ ಈಗಾಗಲೇ ಹಲವು ರೀತಿಯಲ್ಲಿ ಪರಿಹಾರ ಕ್ರಮಗಳನ್ನು ತೆಗೆದುಕೊಂಡಿದೆ. ಕೇಂದ್ರಕ್ಕೆ ನೆರೆ ಪರಿಸ್ಥಿತಿಯ ಸಂಪೂರ್ಣ ಅರಿವಿದೆ. ಮತ್ತೆ ಅದಕ್ಕಾಗಿ ಪ್ರಧಾನಿ ಅವರನ್ನು ಭೇಟಿ ನಾಡುವ ಅಗತ್ಯ ಇಲ್ಲ ಎಂದರು.
ReplyForward |