ದೆಹಲಿ: ತಾರಕಕ್ಕೇರಿದ ಬೆಡ್ ಗಳ ಅಭಾವ: 10 ಬೆಡ್ ಗಳ ಆಸ್ಪತ್ರೆಗಳನ್ನೂ ಕೋವಿಡ್ ಆಸ್ಪತ್ರೆಗಳೆಂದು ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ವೈರಸ್ ಅಬ್ಬರ ಜೋರಾಗಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಹೊಸ ಸೋಂಕು ಪೀಡಿತರಿಗೆ ಬೆಡ್ ಗಳ ತೀವ್ರ ಕೊರತೆಯುಂಟಾಗುತ್ತಿದೆ.

ಇದೇ ಕಾರಣಕ್ಕೆ ದೆಹಲಿ ಸರ್ಕಾರ ಸೋಂಕಿತರಿಗೆ ಬೆಡ್ ಗಳನ್ನು ನೀಡುವ ಸಂಬಂಧ ಹಸಸಾಹಸ ಪಡುತ್ತಿದೆ. ಈ ಹಿಂದೆ ದೆಹಲಿಗರಿಗೆ ಮಾತ್ರ ದೆಹಲಿಯಲ್ಲಿ ಕೊರೋನಾ ಚಿಕಿತ್ಸೆ ಎಂದು ಹೇಳಿದ್ದ ಸರ್ಕಾರ ಇದೀಗ ದೆಹಲಿಯಲ್ಲಿರುವ ಸಣ್ಣ ಪುಟ್ಟ ನರ್ಸಿಂಗ್ ಹೋಮ್ ಗಳನ್ನೂ ಕೂಡ ಕೋವಿಡ್ ಆಸ್ಪತ್ರೆಗಳಾಗಿ ಬದಲಾಯಿಸುವ ನಿರ್ಧಾರ ಮಾಡಿದೆ.  ನರ್ಸಿಂಗ್ ಹೋಮ್ ಕಾಯ್ದೆಯಡಿ ಈ ನಿಯಮ ಜಾರಿಗೆ ತರಲಾಗುತ್ತಿದೆ. ನಿಯಮ ಮೀರಿದರೆ ಕಠಿಣ ಕ್ರಮ ಜರುಗಿಸುವುದಾಗಿಯೂ ದೆಹಲಿ ಸರ್ಕಾರ ಹೇಳಿದೆ.

ಮೂಲಗಳ ಪ್ರಕಾರ ದೆಹಲಿಯಲ್ಲಿರುವ 10 ರಿಂದ 49 ಬೆಡ್ ಗಳ ಎಲ್ಲ ಆಸ್ಪತ್ರೆಗಳನ್ನೂ ಕೋವಿಡ್-19 ಚಿಕಿತ್ಸೆಗಾಗಿಯೇ ಮೀಸಲಿಡುವಂತೆ ದೆಹಲಿ ಸರ್ಕಾರ ಆದೇಶಿಸಿದೆ. ನೇತ್ರಧಾಮಗಳು, ಇಎನ್ ಟಿ ಆಸ್ಪತ್ರೆಗಳು, ಡಯಾಲಿಸಿಸ್ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳು, ಐವಿಎಫ್ ಕೇಂದ್ರಗಳನ್ನು ಈ ನಿಯಮದಿಂದ ಹೊರತು ಪಡಿಸಲಾಗಿದೆ. 

ಕ್ರೀಡಾಂಗಣ, ಮದುವೆ ಹಾಲ್ ಗಳೂ ಕೋವಿಡ್ ಚಿಕಿತ್ಸೆಗೆ ಬಳಕೆ
ಇನ್ನು ದೆಹಲಿಯಲ್ಲಿ ಕ್ರೀಡಾಂಗಣ, ಮದುವೆ ಹಾಲ್ ಗಳನ್ನೂ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಸುಮಾರು 20 ಸಾವಿರ ಬೆಡ್ ಗಳ ಕೊರತೆ ನೀಗಿಸಲು ನಿರ್ಧರಿಸಲಾಗಿದೆ. ಈಗಾಗಲೇ ದಕ್ಷಿಣ ದೆಹಲಿಯ ರಾಧಾ ಸೋಮಿ ಸತ್ಸಂಗ್ ಬಿಯಾಸ್ ಕ್ಯಾಂಪಸ್ ನಲ್ಲಿ 10 ಸಾವಿರ ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಆಪ್ ಸರ್ಕಾರ ಸಿದ್ಧತೆ ನಡೆಸಿದ್ದು, ಜೂನ್ ಅಂತ್ಯಕ್ಕೆ ನಿರ್ಮಾಣ ಕಾರ್ಯ ಮುಗಿಯಲಿದೆ. ಇನ್ನೂ 10 ಸಾವಿರ ಬೆಡ್ ಗಳಿಗಾಗಿ ಹೊಟೆಲ್ ಗಳು, ಕ್ರೀಡಾಂಗಣಗಳು, ಮದುವೆ ಹಾಲ್ ಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
 

Leave a Reply

Your email address will not be published. Required fields are marked *

error: Content is protected !!