ದೆಹಲಿ ಮಸೀದಿಗೆ ತೆರಳಿದ್ದ ಕಲಬುರಗಿಯ 26 ಮಂದಿಯಲ್ಲಿ ಕೊರೋನಾ ಸೋಂಕಿಲ್ಲ: ಜಿಲ್ಲಾಧಿಕಾರಿ

ಕಲಬುರಗಿ: ಇತ್ತೀಚೆಗೆ ದೆಹಲಿಯ ನಿಜಾಮುದ್ದೀನ್‍ನಲ್ಲಿ ಜರುಗಿದ ತಬ್ಲೀಗ್ ಜಮಾತ್ ನ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ್ದ 26 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಹೇಳಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶರತ್ ಅವರು, ಇತ್ತೀಚೆಗೆ ಪರೀಕ್ಷೆಗೆ ಕಳುಹಿಸಲಾಗಿದ್ದ 26 ಮಂದಿಯ ವೈದ್ಯಕೀಯ ವರದಿ ತಮ್ಮ  ಕೈಸೇರಿದ್ದು, ಎಲ್ಲ 26 ಮಂದಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿಲ್ಲ ಎಂದು ಹೇಳಿದ್ದಾರೆ. ಈ ಎಲ್ಲ 26 ಮಂದಿ ಇತ್ತೀಚೆಗೆ ದೆಹಲಿಯ  ನಿಜಾಮುದ್ದೀನ್‍ನಲ್ಲಿ ಜರುಗಿದ ತಬ್ಲೀಗ್ ಜಮಾತ್ ನ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಮರಳಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿತ್ತು. ಆದರೆ ಈಗ ಇವರಲ್ಲಿ ಸೋಂಕು ಅಂಟಿಲ್ಲ ಎಂಬ ವಿಚಾರ ಜಿಲ್ಲೆಯ  ನಾಗರಿಕರು ನಿಟ್ಟಿಸಿರು ಬಿಡುವಂತೆ ಮಾಡಿದೆ.

ಪ್ರಸ್ತುತ ಈ ಎಲ್ಲ 26 ಮಂದಿ ಕ್ವಾರಂಟೈನ್ ನಲ್ಲಿದ್ದ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಹೇಳಿದ್ದಾರೆ.

ಈ ಹಿಂದೆ ಕಲಬುರಗಿ ಜಿಲ್ಲೆಯಿಂದ ದೆಹಲಿಯ ಧಾರ್ಮಿಕ ಸಭೆಗೆ ತೆರಳಿದ್ದ 65 ವರ್ಷದ ವೃದ್ಧ ಜಿಲ್ಲೆಗೆ ವಾಪಸ್ ಆಗಿ ಸಾವನ್ನಪ್ಪಿದ್ದರು. ಅವರಲ್ಲಿ ಕೊರೋನಾ ವೈರಸ್ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಅವರ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಅವರ ಪುತ್ರಿಯಲ್ಲೂ  ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಅವರೂ ಕೂಡ ಇದೀಗ ಚೇತರಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!