ತೆರಿಗೆ ವಂಚನೆ ಆರೋಪ: ಫ್ಲಿಪ್ ಕಾರ್ಟ್ ಮತ್ತು ಸ್ವಿಗ್ಗಿ ಸಂಸ್ಥೆಗೆ ಐಟಿ ದಾಳಿ ?
ಬೆಂಗಳೂರು: ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಪ್ರತಿಷ್ಟಿತ ಆನ್ಲೈನ್ ಶಾಪಿಂಗ್ ಹಾಗೂ ಫುಡ್ ಡೆಲಿವರಿ ಕಂಪೆನಿಗಳಾದ ಫ್ಲಿಪ್ ಕಾರ್ಟ್ ಮತ್ತು ಸ್ವಿಗ್ಗಿ ಸಂಸ್ಥೆಗಳ ಬೆಂಗಳೂರಿನ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ರಾಷ್ಟ್ರೀಯ ಸುದ್ಧಿ ಸಂಸ್ಥೆಯೊಂದು ವರದಿ ಮಾಡಿದೆ.
ಅಮೆರಿಕದ ವಾಲ್‌ಮಾರ್ಟ್ ಒಡೆತನದ ಫಿಪ್‌ಕಾರ್ಟ್ ಹಾಗೂ ಸ್ಥಳೀಯವಾಗಿ ಆಹಾರ ವಿತರಣೆ ಮಾಡುವ ಸ್ವಿಗ್ಗಿಯಲ್ಲಿ ಮೂರನೇ ವ್ಯಕ್ತಿಗಳು ತೆರಿಗೆ ವಂಚನೆ ಎಸಗಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎನ್ನಲಾಗಿದೆ. ಪ್ಲಿಪ್‌ಕಾರ್ಟ್ನ ಲಾಜಿಸ್ಟಿಕ್ಸ್ ಅಂಗವಾಗಿರುವ ಇನ್ಸ್ ಟಾಕಾರ್ಟ್ ಸಂಸ್ಥೆಯ ಕಚೇರಿಯಲ್ಲಿನಿನ್ನೆ (ಜ.೭) ದಾಳಿ ನಡೆದಿದ್ದು, ರಾತ್ರಿ ವೇಳೆ ಶೋಧಕಾರ್ಯ ಮುಗಿದಿದೆ. ಸುಮಾರು ೨೦ ಅಧಿಕಾರಿಗಳ ತಂಡ ಈ ಕಚೇರಿಗೆ ಭೇಟಿ ಕೊಟ್ಟು ಕಂಪನಿಯ ವೆಂಡರ್‌ಗಳಿಗೆ ನೀಡಲಾದ ಇನ್‌ವಾಯ್ಸ್ ಮೊದಲಾದ ಕಡತಗಳನ್ನ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಈ ಕುರಿತಂತೆ ಪ್ಲಿಪ್‌ಕಾರ್ಟ್ ಸಂಸ್ಥೆ, ತಮ್ಮ ಕಂಪನಿಯ ಎಲ್ಲಾ ರೀತಿಯ ತನಿಖೆಗೆ ಸಹಕಾರ ನೀಡಿ ಮಾಹಿತಿಯನ್ನು ನೀಡಲಾಗಿದೆ ಎಂದಿದ್ದು, ಮತ್ತೊಂದೆಡೆ ಸ್ವಿಗ್ಗಿ ಕೂಡ ತೆರಿಗೆ ವಂಚನೆ ಮಾಡಿಲ್ಲ ಎಂದು ಹೇಳಿರೋದಾಗಿ ಸುದ್ದಿ ಸಂಸ್ಥೆ ವರದಿಯಲ್ಲಿ ತಿಳಿಸಲಾಗಿದೆ.