ಕೊರೋನಾಘಾತ: 24 ಗಂಟೆಗಳಲ್ಲಿ 3604 ಮಂದಿಗೆ ವೈರಸ್ ದೃಢ, 70,756 ಕ್ಕೇರಿದ ಸೋಂಕಿತರ ಸಂಖ್ಯೆ
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 3,604 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 70,756ಕ್ಕೆ ಏರಿಕೆಯಾಗಿದೆ.
70756 ಮಂದಿ ಸೋಂಕಿತರ ಪೈಕಿ ಈ ವರೆಗೂ 22454 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 46008 ಮಂದಿ ಇನ್ನೂ ಸೋಂಕಿನಿಂದ ಬಳಲುತ್ತಿದ್ದಾರೆ.
ಈ ನಡುವೆ ದೇಶದಲ್ಲಿ ಈ ವರೆಗೂ 2293 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದು, ದೇಶದಲ್ಲಿ ಆತಂಕ ಮತ್ತಷ್ಟು ಹೆಚ್ಚಾಗತೊಡಗಿದೆ.
ಕೊರೋನಾ ಇನ್ನೂ ಸಮುದಾಯ ಹಂತ ತಲುಪಿಲ್ಲ
ಭಾರತದಲ್ಲಿ ಕೊರೋನಾ ಸೋಂಕು ಸಮುದಾಯ ಹಂತ ತಲುಪಿಲ್ಲ ಎಂದು ಕೇಂದ್ರ ಸರ್ಕಾರ ಪುನಃ ಸ್ಪಷ್ಟಪಡಿಸಿದೆ.
ಕೆಲವೇ ಕೆಲವು ಕ್ಲಸ್ಟರ್’ಗಳು ಇದ್ದು, ಅವುಗಳನ್ನು ಗುರುತಿಸಲಾಗಿದೆ. ಅಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ಜರುಗಿಸಲಾಗಿದೆ ಎಂದು ಹೇಳಿದೆ.
ದೇಶದಲ್ಲಿ 24 ಗಂಟೆಗಳಲ್ಲಿ 4213 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆದರೆ, ಸೋಂಕು ಸಾಮುದಾಯಿಕವಾಗಿಲ್ಲ. ಕೆಲವು ಕ್ಲಸ್ಟರ್ ಗಳಲ್ಲಿ ಸೋಂಕು ವ್ಯಾಪಕವಾಗಿದೆ ಎಂದು ಕೇಂದ್ರ ಸಚಿವ ವಲ್ ಅಗರ್ವಾಲ್ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಬಾಗಲಕೋಟೆಯಲ್ಲಿ 15, ಹಾಸನದಲ್ಲಿ 5, ಧಾರವಾಡದಲ್ಲಿ 9 ಕೊರೋನಾ ಸೋಂಕಿತ ಪ್ರಕರಣಗಳು ಸೇರಿ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಒಟ್ಟು 42 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.