ಕಿಯಾ ‘ಸೆಲ್ಟೋಸ್’ ಎಸ್ ಯುವಿ ಬಿಡುಗಡೆ, 35 ಸಾವಿರ ದಾಖಲೆಯ ಮುಂಗಡ ಬುಕಿಂಗ್
ಬೆಂಗಳೂರು: ವಿಶ್ವದ 8ನೇ ಅತಿ ದೊಡ್ಡ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್, ನೂತನ ಸ್ಟೈಲಿಶ್ ಹಾಗೂ ಬೋಲ್ಡ್ ಎಸ್ ಯುವಿ ‘ಸೆಲ್ಟೋಸ್’ ಅನ್ನು ಶುಕ್ರವಾರ ನಗರದಲ್ಲಿ ಬಿಡುಗಡೆಗೊಳಿಸಿತು.
ಪೆಟ್ರೋಲ್, ಡೀಸೆಲ್ ಹಾಗೂ ಟರ್ಬೋ ಪೆಟ್ರೋಲ್ ಮಾದರಿಗಳಲ್ಲಿ ಲಭ್ಯವಿರುವ ಈ ವಾಹನ ಅತ್ಯುತ್ತಮ ಒಳಾಂಗಣ ವಿನ್ಯಾಸವನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ 9.69 ಲಕ್ಷ ರೂ.ಗಳಿಗೆ ಲಭ್ಯವಿದೆ.
ಹುಂಡೈ ಕ್ರೇಟಾ, ಹೆಕ್ಟೇರ್ ನಂತಹ ಎಸ್ ಯುವಿಗಳಿಗೆ ಸ್ಪರ್ಧೆ ನೀಡುವಂತೆ ತಯಾರಾಗಿರುವ ಈ ವಾಹನಕ್ಕೆ ಈಗಾಗಲೇ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಬಿಡುಗಡೆಗೂ ಮುನ್ನವೇ 32 ಸಾವಿರ ಕಾರುಗಳಿಗೆ ಬೇಡಿಕೆಗಳು ಬಂದಿವೆ.
ಈ ಕಾರು ಕೆಂಪು, ಕಪ್ಪು, ಕೇಸರಿ, ನೀಲಿ, ಬೂದು, ಸಿಲ್ವರ್ ಹಾಗೂ ಎರಡು ಮಾದರಿಯ ಬಿಳಿ ಬಣ್ಣಗಳಲ್ಲಿ ಲಭ್ಯವಿದೆ. ಉಳಿದಂತೆ ಕೆಂಪು-ಕಪ್ಪು, ಕಪ್ಪು-ಬಿಳಿ, ಸಿಲ್ವರ್- ಕಪ್ಪು, ಸಿಲ್ವರ್-ಕೇಸರಿ, ಬಿಳಿ-ಕೇಸರಿಯ ಮಿಶ್ರ ಬಣ್ಣಗಳಲ್ಲಿ ಕೂಡ ದೊರೆಯುತ್ತವೆ. ಇವುಗಳಲ್ಲಿ ಸಾಮಾನ್ಯ ವಾತಾವರಣಕ್ಕೆ ಹೊಂದಿಕೆಯಾಗುವಂತೆ, ಎಕೋ ಹಾಗೂ ಸ್ಪೋರ್ಟ್ ಮೋಡ್ ಗಳನ್ನು ಆಯ್ದುಕೊಳ್ಳುವ ಅವಕಾಶವಿದೆ. ಇದರಲ್ಲಿ ಜಿ-ಟಿ ಲೈನ್ ಹಾಗೂ ಟೆಕ್ ಲೈನ್ ಮಾದರಿಗಳನ್ನು ಬಿಡುಗಡೆಗೊಳಿಸಲಾಗಿದೆ.
ಡಿಆರ್ ಎಲ್ ಅನ್ನು ಒಳಗೊಂಡ ಎಲ್ ಇಡಿ ಹೆಡ್ ಲ್ಯಾಂಪ್ ಗಳು, 17.0 ಕ್ರಿಸ್ಟಲ್ ಕಟ್ ಅಲೋಯ್ ಇರುವ ಚಕ್ರಗಳು ಕಾರಿನ ಸಾಹಸಮಯ ಪಯಣಕ್ಕೆ ಸಾಥ್ ನೀಡುತ್ತವೆ. ಕಾರಿನ ಮೇಲ್ಮೈ ಅನ್ನು ತೆರೆಯಲು ಅವಕಾಶವಿರುವುದರಿಂದ ಆರಾಮದಾಯಕ ಚಾಲನಾ ಅನುಭವ ದೊರೆಯುತ್ತದೆ.
ಒಳಾಂಗಣದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಬದಲಿಸಬಹುದಾದ ಆರಾಮದಾಯಕ ಸೀಟ್ ಗಳು, ಮನಸ್ಸಿಗೆ ಮುಧ ನೀಡುವ ಎಲ್ ಐಡಿ ಬೆಳಕಿನ ವ್ಯವಸ್ಥೆ, ಏರ್ ಪ್ಯೂರಿಫೈಯರ್ ಹಾಗೂ ಸಾಕಷ್ಟು ಸ್ಥಳವಕಾಶ. 10.25 ಎಚ್ ಡಿ ಟಚ್ ಸ್ಕ್ರೀನ್, ಸುಧಾರಿತ 7.0 ಡಿಸ್ ಪ್ಲೇ, 8 ಸ್ಪೀಕರ್, 360 ಡಿಗ್ರಿ ಕ್ಯಾಮೆರಾದಿಂದ ಈ ಕಾರು ಇತರ ಹೈ-ಎಂಡ್ ಕಾರುಗಳಿಗೆ ಸ್ಪರ್ಧೆ ನೀಡುವಂತಿದೆ.
ಸುರಕ್ಷತೆಯ ದೃಷ್ಟಿಯಿಂದ ವಾಹನ ತಯಾರಿಸುವಾಗ ಸುಧಾರಿತ ಅತಿ ಸದೃಢ ಸ್ಟೀಲ್ ಅನ್ನು (ಎಎಚ್ ಎಸ್ಎಸ್) ಬಳಸಲಾಗಿದೆ. ಚಾಲಕರು, ಪ್ರಯಾಣಿಕರ ಸುರಕ್ಷತೆಗಾಗಿ ಆರು ಏರ್ ಬ್ಯಾಗ್ ಗಳು, ಡಿಸ್ಕ್ ಬ್ರೇಕ್ ಗಳು ಹಾಗೂ ಚಕ್ರದ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಚಾಲಕರಿಗೆ ಸುರಕ್ಷಿತ ಚಾಲನೆಯನ್ನು ಖಾತರಿಪಡಿಸುತ್ತವೆ. ಜೊತೆಗೆ, ವಾಹನಗಳ ಬಿಡಿಭಾಗಗಳು ದೇಶದ 160 ನಗರಗಳಲ್ಲಿನ 265 ಟಚ್ ಪಾಯಿಂಟ್ ಗಳಲ್ಲಿ ಲಭ್ಯವಾಗಲಿದೆ.
ಪೆಟ್ರೋಲ್ ಎಸ್ ಯುವಿ ಗರಿಷ್ಠ 140/6000 ಆರ್ ಪಿಎಂ ಪವರ್ ಹಾಗೂ ಗರಿಷ್ಠ 242/3200 ಅರ್ ಪಿಎಂ ಟಾರ್ಕ್ ಅನ್ನು ಒಳಗೊಂಡಿದೆ. ಡೀಸೆಲ್ ಎಸ್ ಯುವಿ ಗರಿಷ್ಠ 115/4000 ಆರ್ ಪಿಎಂ ಪವರ್ ಹಾಗೂ ಗರಿಷ್ಠ 250/2750 ಅರ್ ಪಿಎಂ ಟಾರ್ಕ್ ಅನ್ನು ಒಳಗೊಂಡಿದೆ.
ವಾಹನ ಬಿಡುಗಡೆಗೊಳಿಸಿ ಮಾತನಾಡಿದ ಕಿಯಾ ಮೋಟಾರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಹಣಾಧಿಕಾರಿ ಕೂಖ್ಯುಂಶಿಮ್ ಅವರು, ಸೆಲ್ಟೋಸ್ ತಮ್ಮ ಸಂಸ್ಥೆಯ ಮಹತ್ವಾಕಾಂಕ್ಷೆಯ ವಾಹನವಾಗಿದ್ದು, ಈ ಮೂಲಕ ಭಾರತೀಯ ಮಾರುಕಟ್ಟೆ ಪ್ರವೇಶಿಸುತ್ತಿದ್ದೇವೆ. ಈ ವಾಹನ ಪರಿಸರ ಸ್ನೇಹಿಯಾಗಿದ್ದು, ಎಲ್ಲಾ ಅಗತ್ಯ ಪರೀಕ್ಷೆಗಳನ್ನು ಎದುರಿಸಿದೆ. ಗ್ರಾಹಕರಿಗೆ ಅತ್ಯಾಧುನಿಕ ಇಂಜಿನ್, ಇಂಧನ ಹಾಗೂ ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ಹೊಂದಿದೆ. ಇದು ಇತರ ಎಸ್ ಎಲ್ ವಿಗಳು ಹೊಂದಿರದಂತಹ ವಿನ್ಯಾಸ ಹಾಗೂ ಸೌಲಭ್ಯಗಳನ್ನು ಒಳಗೊಂಡಿದೆ ಎಂದರು.
ಕಿಯಾ ಮೋಟಾರ್ಸ್ ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮನೋಹರ್ ಭಟ್, ಕಿಯಾ ಸಂಸ್ಥೆ ತನ್ನ ವಾಹನಗಳ ವಿನ್ಯಾಸಗಳಿಗೆ ಪ್ರಸಿದ್ಧಿಯಾಗಿದೆ. ಈ ವಾಹನ ಕೂಡ ವಿನೂತನ ವಿನ್ಯಾಸಗಳನ್ನು ಒಳಗೊಂಡಿದೆ. ಈಗಾಗಲೇ ಆಂಧ್ರಪ್ರದೇಶದ ಅನಂತಪುರದಲ್ಲಿರುವ ತಯಾರಿಕಾ ಘಟಕದಲ್ಲಿ 3 ಲಕ್ಷ ವಾಹನಗಳು ರಸ್ತೆಗಿಳಿಯಲು ಸಿದ್ಧವಾಗಿವೆ ಎಂದರು.
ಆಟೊಮೊಬೈಲ್ ಮಾರುಕಟ್ಟೆ ಕುಸಿತದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಭಾರತೀಯ ಮಾರುಕಟ್ಟೆ ಅಲ್ಪಮಟ್ಟಿಗೆ ಕುಸಿದಿರುವುದು ನಿಜ. ಆದರೆ, ಅದು ತಾತ್ಕಾಲಿಕ. ಸರ್ಕಾರ ಮಾರುಕಟ್ಟೆಯನ್ನು ಸ್ಥಿರವಾಗಿರಿಸಲು ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂಬ ನಂಬಿಕೆಯಿದೆ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ವಾಹನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ಆರ್ಥಿಕ ವರ್ಷದಿಂದ ಸರ್ಕಾರ ಬಿಎಸ್ 4 ಇಂಜಿನ್ ಅನ್ನು ರದ್ದುಗೊಳಿಸಲು ಮುಂದಾಗಿದ್ದು, ತಾವು ಸುಧಾರಿತ ತಂತ್ರಜ್ಞಾನವಾಗಿ ಬಿಎಸ್ 6 ಇಂಜಿನ್ ಅನ್ನು ಈಗಾಗಲೇ ಅಳವಡಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.