ಕಾರ್ಕಳ: ಸುಟ್ಟ ಸ್ಥಿತಿಯಲ್ಲಿ ಗೇರು ಬೀಜ ಕಾರ್ಖಾನೆ ಕಾರ್ಮಿಕನ ಮೃತ ದೇಹ ಪತ್ತೆ- ಕೊಲೆ ಶಂಕೆ
ಕಾರ್ಕಳ ಅ.20(ಉಡುಪಿ ಟೈಮ್ಸ್ ವರದಿ):ತಾಲೂಕಿನ ಕಸಬಾ ಗ್ರಾಮದ ಗೇರು ಬೀಜ ಕಾರ್ಖಾನೆಯ ಕಾರ್ಮಿಕರೊಬ್ಬರ ಮೃತದೇಹವು ಅನುಮನಾಸ್ಪದ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೇರಳ ಮೂಲದ ಗೋಪಿ (60) ಮೃತಪಟ್ಟವರು. ಕಾರ್ಖಾನೆಯ ಪಾಲುದಾರರಾಗಿ ಉಸ್ತುವಾರಿ ನೋಡಿಕೊಂಡಿರುವ ದಿಲೀಪ್.ಜಿ ಎಂಬವರಿಗೆ, ಕಾರ್ಖಾನೆಯ ಗ್ರಾಸ್ ಕಟ್ಟಿಂಗ್ ಕೆಲಸಕ್ಕೆ ಬಂದಿದ್ದ ವಸಂತ ಎಂಬವರು ನೀಡಿದ ಮಾಹಿತಿಯಂತೆ ತಮ್ಮ ಕಾರ್ಖಾನೆ ಎದುರು ಬಂದು ನೋಡಿದಾಗ ಗೋಪಿ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಮೃತದೇಹದ ಹತ್ತಿರ ಸಿಗರ್ ಲೈಟರ್ ಹಾಗೂ ಪೆಟ್ರೋಲ್ ಕ್ಯಾನಿನ ಮುಚ್ಚಳ ಕಂಡು ಬಂದಿರುತ್ತದೆ.
ಈ ವೇಳೆ ಈ ಬಗ್ಗೆ ವಿಚಾರಿಸಲು ಇನ್ನೊಬ್ಬ ಕಾರ್ಮಿಕ ಬಾಹುಲೇಯನ್ ಎಂಬುವವರಿಗೆ ಫೋನ್ ಮಾಡಿದಾಗ ಆತನ ಮೋಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಆತ ನಾಪತ್ತೆಯಾಗಿದ್ದಾನೆ. ಗೋಪಿ ಹಾಗೂ ಬಾಹುಲೇಯನ್ ಒಂದು ವಾರದ ಹಿಂದೆ ಊರಿಗೆ ಹೋಗಿದ್ದು ಕಳೆದ ಮಂಗಳವಾರ ವಾಪಾಸು ಕೆಲಸಕ್ಕೆ ಬಂದಿದ್ದರು. ಅ.18 ರಂದು ಸಂಜೆ ಗೋಪಿ ಅವರು ದಿಲೀಪ್.ಜಿ ರವರಿಗೆ ಕರೆ ಮಾಡಿ ಮಾತನಾಡಿದ್ದರು. ಆದ್ದರಿಂದ ಅ.18 ರ ಸಂಜೆಯಿಂದ ಅ.19ರ ಬೆಳಗ್ಗಿನ ಅವಧಿಯಲ್ಲಿ ಗೋಪಿಯು ಯಾವುದೋ ಕಾರಣದಿಂದ ಬೆಂಕಿಯಿಂದ ಸುಟ್ಟು ಮೃತಪಟ್ಟಿದ್ದಾರೆ. ಆದರೆ ಜೊತೆಯಲ್ಲಿದ್ದ ಬಾಹುಲೇಯನ್ ಕಾಣೆಯಾಗಿರುವುದರಿಂದ ಗೋಪಿಯ ಮರಣದಲ್ಲಿ ಸಂಶಯ ಕಂಡುಬಂದಿರುವುದಾಗಿ ದಿಲೀಪ್.ಜಿ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.