ಎಲ್‌ಐಸಿ 2018–19ನೇ ಸಾಲಿನಲ್ಲಿ ಶೇ.80.83 ಸಾಧನೆ:ಅನಂತ ಪದ್ಮನಾಭ
ಉಡುಪಿ: ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಉಡುಪಿ ವಿಭಾಗವು 2018–19ನೇ ಸಾಲಿನಲ್ಲಿ ರೂ. 282.91 ಕೋಟಿ ಪ್ರಥಮ ಪ್ರೀಮಿಯಂ ಗಳಿಸುವ ಮೂಲಕ ಶೇ. 80.83ರಷ್ಟು ಸಾಧನೆ ಮಾಡಿದೆ ಎಂದು ಎಲ್‌ಐಸಿ ಉಡುಪಿ ವಿಭಾಗದ ವ್ಯವಸ್ಥಾಪಕ ಅನಂತ ಪದ್ಮನಾಭ ಹೇಳಿದರು. ಅಜ್ಜರಕಾಡಿನ ಎಲ್‌ಐಸಿ ಉಡುಪಿ ವಿಭಾಗ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018–19ನೇ ಸಾಲಿನಲ್ಲಿ ಎಲ್‌ಐಸಿ ಉಡುಪಿ ವಿಭಾಗ ಪ್ರಥಮ ಪ್ರೀಮಿಯಂ ಗಳಿಕೆಯಲ್ಲಿ 350 ಕೋಟಿ ರೂ. ಸಂಗ್ರಹದ ಗುರಿ ಹೊಂದಿದ್ದು, 282.91 ಕೋ. ರೂ. ಸಂಗ್ರಹಿಸುವ ಮೂಲಕ ಶೇ. 80.83 ಗುರಿ ಸಾಧಿಸಿದೆ. ಇದೇ ವೇಳೆ ಪಾಲಿಸಿ ವಿಕ್ರಯದ 1.63 ಲಕ್ಷ ನಿಗದಿತ ಗುರಿ ಪೈಕಿ 1,33,764 ಪಾಲಿಸಿಗಳನ್ನು ವಿಕ್ರಯಿಸುವ ಮೂಲಕ ಶೇ. 82.06 ಸಾಧನೆ ಮಾಡಲಾಗಿದೆ ಎಂದರು. ಪಾಲಿಸಿಗಳಿಗೆ ಮೊಬೈಲ್ ಸಂಖ್ಯೆ ಜೋಡಿಸಿ ಪ್ರೀಮಿಯಂ ಕಂತು ಪಾವತಿ, ಬೋನಸ್ ಮೊದಲಾದ ಮಾಹಿತಿಯನ್ನು ಪಾಲಿಸಿದಾರರಿಗೆ ನೀಡುವ ಉದ್ದೇಶದಿಂದ ಹಾಗೂ ಮುಂದೆ ಮೊಬೈಲ್‌ನಲ್ಲಿಯೇ ವ್ಯವಹಾರ ನಡೆಸಲು ಅನುಕೂಲ ಆಗುವ ನಿಟ್ಟಿನಲ್ಲಿ ಗ್ರಾಹಕರಿಗೆ ತಮ್ಮ ಪಾಲಿಸಿಗಳಿಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡುವಂತೆ ಮನವಿ ಮಾಡಲಾಗಿದೆ. ಹಾಗೆಯೇ ತಮ್ಮ ವಿಳಾಸದ ಪೀನ್‌ಕೋಡ್ ನೀಡಬೇಕು. ಇದನ್ನು ತಮ್ಮ ಏಜೆಂಟ್ ಅಥವಾ ಶಾಖೆಗೆ ಬಂದು ನೀಡಬಹುದು ಎಂದು ಉಡುಪಿ ವಿಭಾಗದ ವ್ಯವಸ್ಥಾಪಕ ಅನಂತ ಪದ್ಮನಾಭ ತಿಳಿಸಿದ್ದಾರೆ. ಇದೇ ವರ್ಷದ ಮಾರ್ಚ್ 31ರ ಅಂತ್ಯಕ್ಕೆ 1,85,458 ಪಾಲಿಸಿಗಳ ಮೂಲಕ 941.62 ಕೋಟಿ ರೂ. ವಿವಿಧ ದಾವೆಗಳನ್ನು ಪಾವತಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮರಣ ದಾವೆ ಹೊರತುಪಡಿಸಿ 1,88,813 ಪಾಲಿಸಿಗಳಲ್ಲಿ ಸುಮಾರು 741 ಕೋಟಿ ರೂ. ದಾವೆ ಪಾವತಿಸಲು ಉದ್ದೇಶಿಸಲಾಗಿದೆ. ಈ ವರ್ಷದ ಆ. 15ರ ವರೆಗೆ 35,559 ಪಾಲಿಸಿಗಳು ಮಾರಾಟಗೊಂಡು 80.60 ಕೋ. ರೂ. ಪ್ರಥಮ ಪ್ರೀಮಿಯಂ ಸಂಗ್ರಹಿಸಲಾಗಿದೆ. ಪಿಂಚಣಿ ಮತ್ತು ಗುಂಪು ವಿಮೆಯಲ್ಲಿ ಉಡುಪಿ ವಿಭಾಗ ಕಳೆದ ಆರ್ಥಿಕ ವರ್ಷದಲ್ಲಿ 556 ವಿವಿಧ ಯೋಜನೆಗಳಲ್ಲಿ 1,22,27,168 ಜೀವಿತಗಳಿಂದ 1809.53 ಕೋ. ರೂ. ಪ್ರಥಮ ಪ್ರೀಮಿಯಂ ಆದಾಯ ಗಳಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 17 ಯೋಜನೆಗಳ ಮೂಲಕ 15,00,768 ಜೀವಿತಗಳಿಂದ 264.70 ಕೋ. ರೂ. ಪ್ರಥಮ ಕಂತಿನ ಹಣ ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು. ಮೈಕ್ರೋ ಇನ್ಶೂರೆನ್ಸ್ ಯೋಜನೆಯಡಿ ಮಾರ್ಚ್ ಅಂತ್ಯಕ್ಕೆ 2,599 ಜೀವಿತಗಳ ಮೂಲಕ 5.09 ಲಕ್ಷ ಪ್ರಥಮ ಪ್ರೀಮಿಯಂ ಸಂಗ್ರಹಿಸಲಾಗಿದ್ದು, 26.32 ಕೋ. ರೂ. ರಿನಿವಲ್ ಪ್ರೀಮಿಯಂ ಸಂಗ್ರಹಿಸಲಾಗಿದೆ. 7555 ಪಾಲಿಸಿಗಳು ಅವಧಿಪೂರ್ಣಗೊಳಿಸಲಾಗಿದ್ದು, 8.21 ಕೋ. ರೂ. ಪಾವತಿಸಲಾಗಿದೆ. 719 ಪಾಲಿಸಿಗಳಿಂದ 1.41 ಕೋ. ರೂ. ಮರಣ ದಾವೆ ಪಾವತಿಸಲಾಗಿದೆ. ಉಡುಪಿ ವಿಭಾಗದಲ್ಲಿ ಪ್ರಸ್ತುತ 105 ವಿಮಾ ಗ್ರಾಮ ಹಾಗೂ 12 ವಿಮಾ ಶಾಲೆಗಳನ್ನು ಘೋಷಿಸಲಾಗಿದ್ದು, ಆರ್ಥಿಕ ನೆರವು ನೀಡಲಾಗಿದೆ ಎಂದರು. ಎಲ್‌ಐಸಿ ಉಡುಪಿ ವಿಭಾಗದ ಸೇಲ್ಸ್ ಮ್ಯಾನೇಜರ್ ಸದಾನಂದ ಕಾಮತ್, ಮಾರುಕಟ್ಟೆ ಮ್ಯಾನೇಜರ್ ವೆಂಕಟರಮಣ ಇದ್ದರು. |