ಉಡುಪಿ: ಫಾದರ್ ಆಲ್ಪ್ರೆಡ್ ರೋಚ್ ರನ್ನು”ದೇವರ ಸೇವಕ” ಎಂದು ಘೋಷಣೆ

ಉಡುಪಿ( ಉಡುಪಿ ಟೈಮ್ಸ್ ವರದಿ): ಕಾಫುಚಿನ್ ಧರ್ಮಗುರು ಫಾದರ್ ಆಲ್ಪ್ರೆಡ್ ರೋಚ್ ಇವರನ್ನು ಇಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಡಾ.ಜೆರಾಲ್ಡ್ ಐಸಾಕ್ ಲೋಬೋ ಅವರು “ದೇವರ ಸೇವಕ” ಎಂದು ಘೋಷಿಸಿದರು.
ಬ್ರಹ್ಮಾವರದ ಹೋಲಿ ಫ್ಯಾಮಿಲಿ ದೇವಾಲಯದಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಧರ್ಮಾಧ್ಯಕ್ಷ್ಯರು ದಿವಂಗತ ಫಾದರ್ ಆಲ್ಪ್ರೆಡ್ ರೋಚ್ ಇವರನ್ನು ಸಂತ ಪದವಿಗೇರಿಸುವ ಸಲುವಾಗಿ ಪ್ರಕ್ರಿಯೆಗಳನ್ನು ಆರಂಭಿಸಲು ರೋಮ್ ನ ನೀಡಿದ ಅಧಿಕೃತ ಜ್ಞಾಪನಾ ಪತ್ರವನ್ನು ವಾಚಿಸಿದರು.
ದೇವರ ಸೇವಕ ಎಂಬ ಘೋಷಣೆಯು ಕ್ರೈಸ್ತ ಧರ್ಮ ಸಭೆಯಲ್ಲಿ ಓರ್ವ ವ್ಯಕ್ತಿಯನ್ನು “ಸಂತ” ಎಂದು ಘೋಷಿಸುವ ಪ್ರಕ್ರಿಯೆಯ ಪ್ರಥಮ ಮೆಟ್ಟಿಲಾಗಿದೆ. ಈ ಸಂಧರ್ಭದಲ್ಲಿ ತಮ್ಮ ಸಂದೇಶದಲ್ಲಿ ಮಾತನಾಡಿದ ಧರ್ಮಾಧ್ಯಕ್ಷ್ಯರು “ಇಂದು ನಾವು ಮಾತೆ ಮರಿಯರವರ ಸ್ವರ್ಗಾರೋಹಣದ ಹಬ್ಬ ಮತ್ತು ಭಾರತದ 75 ನೇ ಸ್ವಾತಂತ್ರೋತ್ಸವದ ಜೊತೆಗೆ ಫಾದರ್ ಆಲ್ಪ್ರೆಡ್ ರೋಚ್ ಇವರನ್ನು ಸಂತ ಎಂದು ಘೋಷಿಸುವ ಪ್ರಕ್ರಿಯೆಗಳಿಗೂ ಚಾಲನೆ ನೀಡುತಿದ್ದೇವೆ. ಮೂರು ಸಂಭ್ರಮಗಳಾದರೂ ಇವುಗಳ ಸಂದೇಶ ನಿಜವಾದ ಸ್ವಾತಂತ್ರ್ಯವೇ ಆಗಿದೆ” ಎಂದರು.


ದಿವಂಗತ ಫಾದರ್ ಆಲ್ಪ್ರೆಡ್ ರೋಚ್ ಉಡುಪಿಯ ಬಾರ್ಕೂರಿನಲ್ಲಿರುವ ಮೂಡುಹಡುವಿನಲ್ಲಿ ಜನಿಸಿದ್ದರು. 1944 ರಲ್ಲಿ ಕಾಪುಚಿನ್ ಸಭೆಗೆ ಸೇರಿದ ಅವರಿಗೆ 1951 ರಲ್ಲಿ ಕೋಟಗಿರಿಯಲ್ಲಿ ಯಾಜಕೀ ದೀಕ್ಷೆ ಲಭಿಸಿತ್ತು. 1956 ರಲ್ಲಿ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಇಗರ್ಜಿಗೆ ಧರ್ಮಗುರುಗಳಾಗಿ ಆಗಮಿಸಿದ ಅವರು ಈ ಭಾಗದಲ್ಲಿ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗಾಗಿ ಅಪಾರ ಸೇವೆಯನ್ನು ಸಲ್ಲಿಸಿದ್ದರು. ಅದೇ ರೀತಿ ಕಾರವಾರ ಧರ್ಮಪ್ರಾಂತ್ಯದ ಲೋವರ್ ಕಾಸರಗೋಡು ಮತ್ತು ಬಿನಾಗದಲ್ಲಿ ಕೂಡಾ ಅವರು ಧರ್ಮಗುರುಗಳಾಗಿ ಸೇವೆಯನ್ನು ಸಲ್ಲಿಸಿದ್ದರು. ಫಾದರ್ ಆಲ್ಪ್ರೆಡ್ ರೊಚ್ ರವರ ಮೂಲಕ ಹಲವಾರು ಉಪಕಾರಗಳು ಜನರಿಗೆ ಲಭಿಸಿವೆ.
ಬಲಿಪೂಜೆಯ ಬಳಿಕ ಫಾದರ್ ಆಲ್ಪ್ರೆಡ್ ರೋಚ್ ಇವರ ಸಮಾಧಿಯ ಆಶೀರ್ವಚನ ಮತ್ತು ಪ್ರಾರ್ಥನೆಗಳು ನಡೆದವು . ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ರಿಲೀಜಿಯಸ್ ಎಪಿಸ್ಕೋಪಲ್ ಫಾಧರ್ ರೋಶನ್ ಮಿನೇಜಸ್, ಕಾಪುಚಿನ್ ಸಬೇಯ ಪ್ರೊವಿನ್ಶಿಯಲ್ ಫಾದರ್ ಆಲ್ವಿನ್ ಡಯಾಸ್, ಹೋಲಿ ಫ್ಯಾಮಿಲಿ ಇಗರ್ಜಿಯ ಧರ್ಮಗುರು ಫಾದರ್ ವಿಕ್ಟರ್ ಫೆರ್ನಾಂಡಿಸ್, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪಾರ್ಕಾಧಿಕಾರಿ ಫಾದರ್ ಚೇತನ್ ಹಾಗೂ ಇತರ ಧರ್ಮಗುರುಗಳು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!