ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲಕರ ಅಸೋಸಿಯೇಷನ್ ಉದ್ಘಾಟನೆ
ಉಡುಪಿ ಫೆ.27(ಉಡುಪಿ ಟೈಮ್ಸ್ ವರದಿ): ಉಡುಪಿ ಜಿಲ್ಲಾ ಕ್ಯಾಟರಿಂಗ್ ಮಾಲಕರ ಅಸೋಸಿಯೇಷನ್ ಇಂದು ಸಂಜೆ ಸಂತೆಕಟ್ಟೆಯ ಗ್ರೀನ್ ಎಕ್ಸರ್ ಓಪನ್ ಗಾರ್ಡನ್ ನಲ್ಲಿ ಉದ್ಘಾಟನೆಗೊಂಡಿತು.
ಈ ನೂತನ ಅಸೋಸಿಯೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಅವರು, ಜನರಿಗೆ ಉತ್ತಮ ಗುಣಮಟ್ಟದ ಪರಿಶುದ್ಧವಾದ ಆಹಾರವನ್ನು ನೀಡುವ ಜವಾಬ್ದಾರಿ ಕೇಟರಿಂಗ್ ಮಾಲಕರ ಮೇಲಿದೆ ಎಂದು ಹೇಳಿದರು ಹಾಗೂ ಈ ಸಂಘಟನೆ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು. ಜೊತೆಗೆ ಈ ಜಿಲ್ಲಾ ಕ್ಯಾಟರಿಂಗ್ ಮಾಲಕರ ಅಸೋಸಿಯೇಷನ್ ಮೂಲಕ ಅಸೋಸಿಯೇಷನ್ನ ಸದಸ್ಯರಿಗೆ, ಅವರ ಮನೆಯವರಿಗೆ ಉತ್ತಮ ಪ್ರಯೋಜನ ಸಿಗುವಂತಾಗಲಿ. ಸಂಘ ನಿರಂತರ ಅಭಿವೃದ್ಧಿ ಹೊಂದುತ್ತಾ ಹೋಗಲಿ ಎಂದು ಹರಸಿದರು.
ಈ ವೇಳೆ ದ.ಕ ಜಿಲ್ಲಾ ಕ್ಯಾಟರಿಂಗ್ ಅಸೋಸಿಯೇಷನ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಅವರು ಮಾತನಾಡಿ, ಅದೆಷ್ಟೋ ಮಂದಿ ರಾಜ್ಯಕ್ಕೆ ತೆರಿಗೆ ನೀಡದೇ, ಕಡಿಮೆ ದರದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಾ ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದಾರೆ. ಈ ರೀತಿ ರಾಜ್ಯದಲ್ಲಿ ತೆರಿಗೆ ನೀಡದೇ ಕ್ಯಾಟರಿಂಗ್ ಉದ್ಯಮವನ್ನು ನಡೆಸುತ್ತಿವುದನ್ನು ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರ ಬಳಿ ಈ ಬಗ್ಗೆ ಮನವರಿಕೆ ಮಾಡಬೇಕಾಗುತ್ತದೆ. ಪ್ರತಿಯೊಂದು ವ್ಯವಹಾರದಲ್ಲಿ ಇರುವ ವ್ಯವಸ್ಥೆ ಕ್ಯಾಟರಿಂಗ್ ವ್ಯವಹಾರದಲ್ಲೂ ಇರಬೇಕು. ಇದು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರುತ್ತದೆ ಎಂಬ ನಿರೀಕ್ಷೆ ಹೊಂದಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ನವೀನ್ ಆಮೀನ್ ಅವರು ಮಾತನಾಡಿ, ಕ್ಯಾಟರಿಂಗ್ ವ್ಯವಹಾರದ ಮಾಲಕರಾಗಲಿ, ನೌಕರರಾಗಲಿ ಯಾರಿಗೇ ಸಂಕಷ್ಟ ಬಂದಾಗ ಎಲ್ಲರೂ ಒಟ್ಟಾಗಿ ಸೇರಿಕೊಂಡು ಸ್ಪಂದನೆ ನೀಡಿದರೆ ಈ ಅಸೋಸಿಯೇಷನ್ನ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಹಾಗೂ ಮುಂಬರುವ ಅಡಚಣೆಗಳಿಂದ ಪಾರಾಗಲೂ ಎಲ್ಲರೂ ಒಟ್ಟಾಗಿ ದುಡಿಯಬೇಕು. ಕ್ಯಾಟರಿಂಗ್ ವ್ಯವಹಾರ ನಡೆಸುವವರು ಒಗ್ಗಟ್ಟಾಗಿ ಒಬ್ಬರಿಗೊಬ್ಬರು ಸ್ಪಂದಿಸುವ ಗುಣಹೊಂದಿದ್ದರೆ ಸಂಸ್ಥೆಯ ಅಭಿವೃದ್ಧಿಗೆ ಶಕ್ತಿ ಸಿಕ್ಕಂತಾಗುತ್ತದೆ ಎಂದರು. ಹಾಗೂ ಮುಂದಿನ ದಿನಗಳಲ್ಲಿ ಸಸ್ಯಹಾರಿ ಕ್ಯಾಟರಿಂಗ್ ನವರನ್ನೂ ಸೇರಿಸಿಕೊಂಡು ದೊಡ್ಡಮಟ್ಟದಲ್ಲಿ ಸಂಘಟನೆಯನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಡುಪಿ ಡಯಾಸಿಸ್ನ ವಿಕಾರ್ ಜನರಲ್ ವಂ.ಫರ್ಡಿನೆಂಡ್ ಗೋನ್ಸಾಲ್ವಿಸ್ ಆಶಿರ್ವಚನ ನೀಡಿದರು. ಉಡುಪಿ ಜಿಲ್ಲಾ ಕೇಟರರ್ಸ್ ಮಾಲಕರ ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ಭರತ್ ಸೆಲೆಬ್ರೇಶನ್ ಇದರ ಭರತ್ ಶೆಟ್ಟಿ , ನಿಶಾ ಕೇಟರರ್ಸ್ ಇದರ ಇಗ್ನೆಸಿಯಸ್ ಡಿಸೋಜಾ, ವೈಶಾಲಿ ಕೇಟರರ್ಸ್ ಇದರ ರೊನಾಲ್ಡ್ ರಾಡ್ರಿಗಸ್, ಶಶಿ ಕೇಟರರ್ಸ್ ಇದರ ರವೀಂದ್ರ ಶೆಟ್ಟಿ ಶಿರ್ವ, ಉಪಾಧ್ಯಕ್ಷ ಸಿಟಿ ಕೇಟರರ್ಸ್ ಇದರ ಜೂಲಿಯಸ್ ಲೂಯಿಸ್, ಮೆಲೋನಾ ಕೇಟರರ್ಸ್ ಇದರ ಅನಿಲ್ ಡಿಮೆಲ್ಲೋ, ಅನಿಲ್ ಕೇಟರರ್ಸ್ ಇದರ ಅನಿಲ್ ಡೇಸಾ, ಸಲಹಾ ಸಮಿತಿಯ ಸದಸ್ಯರಾದ ರಾಡ್ರಿಗಸ್ ಕೇಟರರ್ಸ್ ಇದರ ಡ್ಯಾನಿಶ್ ರಾಡ್ರಿಗಸ್, ಸಾರಥಿ ಕೇಟರರ್ಸ್ ಇದರ ದಯಾನಂದ್, ಸಿಂಚನ ಕೇಟರರ್ಸ್ ಇದರ ರಮೇಶ್, ಉಲ್ಲಾಸ್ ಕೇಟರರ್ಸ್ ಇದರ ಭಾಸ್ಕರ್ ಉಪಸ್ಥಿತರಿದ್ದರು.
ಖಜಾಂಚಿ ದೀಕ್ಷಿತ್ ಶೆಟ್ಟಿ ಸ್ವಾಗತಿಸಿದರು. ಅಲ್ವಿನ್ ಆಂದ್ರಾದೆ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಸಾಲಿಯಾನ್ ವಂದಿಸಿದರು.