ಉಡುಪಿ: ಜರ್ಮನ್ ಮೂಲದ ವ್ಯಕ್ತಿ ಶಂಕಿತ ಕೊರೊನಾ, ಜಿಲ್ಲಾಸ್ಪತ್ರೆಗೆ ದಾಖಲು
ಉಡುಪಿ: ಜರ್ಮನ್ ಮೂಲದ ವ್ಯಕ್ತಿಯೊರ್ವರಿಗೆ ಶಂಕಿತ ಸೋಂಕು ಲಕ್ಷಣಗಳು ಕಂಡು ಬಂದಿದ್ದು, ಈ ವ್ಯಕ್ತಿಯನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಂಕಿತ ವ್ಯಕ್ತಿಗೆ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಜರ್ಮನ್‌ನಲ್ಲಿರುವ 31 ವರ್ಷದ ವ್ಯಕ್ತಿಯೊರ್ವರು ಕಳೆದ ಕೆಲವು ವರ್ಷಗಳಿಂದ ಉಡುಪಿಯಲ್ಲಿ ಉಳಿದುಕೊಂಡಿದ್ದರು, ಇತ್ತೀಚೆಗೆ ವಿದೇಶಕ್ಕೆ ಹೋಗಿ ಬಂದಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿಯಿಂದ ಇವರ ಆರೋಗ್ಯದಲ್ಲಿ ಏರುಪೇರು ಆದ ಪರಿಣಾಮ ಇಂದು ಉಡುಪಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು.
ಪರೀಕ್ಷಿಸಿದ ವೈದ್ಯರು ಇವರಿಗೆ ಶಂಕಿತ ಕೊರೊನಾ ಸೋಂಕು ಲಕ್ಷಣಗಳು ಕಂಡು ಬಂದ ಹಿನ್ನೆಲೆ ಜಿಲ್ಲಾಸ್ಪತ್ರೆಯ ವಿಶೇಷ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಂದು “ಉಡುಪಿ ಟೈಮ್ಸ್”ಗೆ ಡಿಎಚ್‌ಒ ತಿಳಿಸಿದ್ದಾರೆ . ವ್ಯಕ್ತಿಯ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು ಪರೀಕ್ಷೆಗಾಗಿ ಶಿವಮೊಗ್ಗ ಲ್ಯಾಬ್‌ಗೆ ಕಳುಹಿಸಲಾಗಿದೆಂದರು.
ಶುಕ್ರವಾರ ಬೆಳಿಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ವಿದ್ಯಾರ್ಥಿಗಳಲ್ಲಿ ಕರೊನಾ ಸೋಂಕು ಲಕ್ಷಣಗಳು ಕಂಡುಬಂದಿಲ್ಲ ಆದ್ದರಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾಗಿ ಹೇಳಿದರು. ಸಾಗರದ ಮಹಿಳೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ ಎಂದರು. ಅದೇ ರೀತಿ ನಿನ್ನೆ ಜಪಾನ್‌ನಿಂದ ಬಂದ ಶಿರ್ವದ ನಿವಾಸಿಗೆ ಕೊರೊನಾ ಸೊಂಕು ಪತ್ತೆಯಾಗಿಲ್ಲ ಎಂದು ಹೇಳಿದ ಡಿಎಚ್‌ಒ ಡಾ. ಸುಧೀರ್‍ಚಂದ್ರ ಸೂಡ, ಇವರೆಗೆ ಉಡುಪಿ ಜಿಲ್ಲೆಯಲ್ಲಿ ದಾಖಲಾದ ರೋಗಿಗಳಿಗೆ ಕೊರೊನಾ ಸೋಂಕು ದೃಡಪಟ್ಟಿಲ್ಲವೆಂದರು.