ಇ- ಅದಾಲತ್‌ನಿಂದ ತ್ವರಿತ ನ್ಯಾಯ: ಹೈಕೋರ್ಟ ನ್ಯಾ.ಅರವಿಂದ ಕುಮಾರ್
ಉಡುಪಿ: ‘ಕೋವಿಡ್ ಸಂಕಷ್ಟದ ಸಮಯದಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಸಂಧಾನ ವ್ಯಾಪ್ತಿಗೊಳಪಡುವ ಪ್ರಕರಣಗಳನ್ನು ಇ-ಲೋಕ ಅದಾಲತ್ ಮೂಲಕ ಶೀಘ್ರ ಇತ್ಯರ್ಥಪಡಿಸಿಕೊಳ್ಳಬಹುದು’ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಾಧೀಶರಾದ ಅರವಿಂದ ಕುಮಾರ್ ತಿಳಿಸಿದರು. ಇ-ಲೋಕ್ ಅದಾಲತ್ ಕುರಿತು ಬೆಂಗಳೂರಿನಲ್ಲಿ ವಿಡಿಯೊ ಸಂವಾದ ನಡೆಸಿ ಮಾಹಿತಿ ನೀಡಿದ ಅವರು, ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಕಕ್ಷಿದಾರರು ವಕೀಲರ ಮೂಲಕ ಅಥವಾ ಇ–ಮೇಲ್ ಮೂಲಕವೂ ಬಗೆಹರಿಸಿಕೊಳ್ಳಬಹುದು. ಪ್ರಕರಣ ಸಂಬಂಧ ರಾಜಿ ಸಂಧಾನ ವಿಚಾರವನ್ನು ಪ್ರಸ್ತಾಪಸಿ, ಉಭಯ ಕಕ್ಷಿದಾರರು ನ್ಯಾಯಾಧೀಶರ ಮಧ್ಯಸ್ಥಿಕೆ ಮೂಲಕ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಿಕೊಳ್ಳಬಹುದು. ಅಪಘಾತ ಪ್ರಕರಣಗಳಲ್ಲಿ ನಷ್ಟ ಪರಿಹಾರ ಹಾಗೂ ವಿಮಾ ಕಂಪನಿಗಳಿಂದ ಪರಿಹಾರ ಕೋರಿರುವ ಪ್ರಕರಣ, ರಾಜಿಯಾಗಬಹುದಾದ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆಗಳು, ಮನಿ ಸೂಟ್, ಚೆಕ್ ಬೌನ್ಸ್ ಸೇರಿದಂತೆ ಹಾಗೂ ಇತರೆ ಸ್ವರೂಪದ ಕೆಲವು ಪ್ರಕರಣಗಳನ್ನು ಪರಿಹರಿಸಿಕೊಳ್ಳಬಹುದು ಎಂದರು. ನ್ಯಾಯಾಧೀಶರಾದ ಅಲೋಕ್ ಆರಾಧ್ಯ ಮಾತನಾಡಿ, ‘ರಾಜ್ಯದಾದ್ಯಂತ ನಡೆಯುವ ಇ-ಲೋಕ ಅದಾಲತ್ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಬಾಕಿ ಇರುವ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ಕಾವೇರಿ ಅವರು ಮಾತನಾಡಿ, ‘ಜಿಲ್ಲೆಯಲ್ಲಿ ಇ–ಲೋಕ ಅದಾಲತ್ ಮೂಲಕ ಬಗೆಹರಿಸಬಹುದಾದ 500 ಪ್ರಕರಣಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 147 ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಗೊಳಿಸಲಾಗಿದೆ. ಆ.25 ರಿಂದಲೇ ಜಿಲ್ಲೆಯಲ್ಲಿ ಯಶಸ್ವಿಯಾಗಿ ಮೆಗಾ ಇ-ಲೋಕ್ ಅದಾಲತ್ ಕಾರ್ಯಕ್ರಮ ನಡೆಯುತ್ತಿದೆ. ಶೀಘ್ರ 250 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು. ಈಗಾಗಲೇ ಇತ್ಯರ್ಥಗೊಂಡ 147 ಪ್ರಕರಣಗಳಲ್ಲಿ 79 ಮೋಟಾರು ವಾಹನ ನಷ್ಟ ಪರಿಹಾರ ಪ್ರಕರಣಗಳಲ್ಲಿ ₹ 2,38,84,000 ಪರಿಹಾರ ನೀಡುವಂತೆ ವಿಮಾ ಕಂಪನಿಗಳಿಗೆ ನ್ಯಾಯಾಲಯ ಆದೇಶಿಸಿದೆ, 18 ಸಿವಿಲ್ ದಾವೆ, 18 ಇತರೆ ಕ್ರಿಮಿನಲ್, 28 ಚೆಕ್ ಬೌನ್ಸ್ ಹಾಗೂ 4 ಕ್ರಿಮಿನಲ್ ಪ್ರಕರಣಗಳು ವಿಲೇವಾರಿಯಾಗಿವೆ ಎಂದು ಮಾಹಿತಿ ನೀಡಿದರು. ಎಲ್ಲ ಪ್ರಕರಣಗಳು ಇ–ಲೋಕ ಅದಾಲತ್ ವ್ಯಾಪ್ತಿಗೆ ಬರುವುದಿಲ್ಲ. ಸಂಧಾನದ ಮೂಲಕ ಬಗೆಹರಿಸಬಹುದಾದ, ಹಾಗೂ ಸಿಪಿಸಿ 320 ಕಾಯ್ದೆಯಡಿ ಬರುವ ಪ್ರಕರಣಗಳನ್ನು ಮಾತ್ರ ಇತ್ಯರ್ಥ ಮಾಡಬಹುದು. ಇದರಿಂದ ಕಕ್ಷಿದಾರರು ಅಲೆದಾಡುವುದು ತಪ್ಪುತ್ತದೆ, ವಿಮಾ ಪರಿಹಾರ ಪ್ರಕರಣಗಳಲ್ಲಿ ಶೀಘ್ರ ಪರಿಹಾರ ಕೈಸೇರಲಿದೆ ಎಂದರು. ‘ವಿಮಾ ಕಂಪನಿ ಅಧಿಕಾರಿಗಳ ಜತೆಗೆ ಸಭೆ’ ಇ –ಲೋಕ ಅದಾಲತ್ ಅನುಷ್ಠಾನ ಸಂಬಂಧ ಈಗಾಗಲೇ ಜಿಲ್ಲೆಯ ವಿಮಾ ಕಂಪನಿ ಅಧಿಕಾರಿಗಳ ಜತೆ ನ್ಯಾಯಾಧೀಶರು ಸಭೆ ನಡೆಸಿದ್ದು, ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಜಿಪ್‌ಸೀ ಆ್ಯಪ್‌ನಲ್ಲಿ ಕಕ್ಷಿದಾರರು, ನ್ಯಾಯಾಧೀಶರು ಸೇರಿದಂತೆ ಪ್ರಕರಣಕ್ಕೆ ಸಂಬಂಧಪಟ್ಟವರು ನಿಗದಿತ ಸಮಯದಲ್ಲಿ ಒಂದೆಡೆ ಸೇರಿ ಪ್ರಕರಣ ಬಗೆಹರಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶೆ ಕಾವೇರಿ ಹೇಳಿದರು. |