ಈ ವರ್ಷ ಶೈಕ್ಷಣಿಕ ಶೂನ್ಯ ಕಲಿಕಾ ವರ್ಷವೆಂದು ಘೋಷಣೆಯಾಗಿಲ್ಲ: ಸುರೇಶ್ ಕುಮಾರ್
ಬೆಂಗಳೂರು: ಶೈಕ್ಷಣಿಕ ಶೂನ್ಯ ಕಲಿಕಾ ವರ್ಷದ ಪ್ರಸ್ತಾವನೆ ಸರ್ಕಾರದ ಮುಂದೆ ಸದ್ಯಕ್ಕಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಯಾವುದೇ ತರಗತಿಯ ಮಕ್ಕಳೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಶಿಕ್ಷಣ ಇಲಾಖೆಯು ಪರ್ಯಾಯ ಬೋಧನಾ ಕ್ರಮಗಳನ್ನು ಚಾಲನೆಯಲ್ಲಿಟ್ಟಿದೆ. ಇಂದಿನಿಂದ ಚಂದನ ವಾಹಿನಿಯಲ್ಲಿ ಪ್ರಾರಂಭವಾಗಿರುವ ಐದರಿಂದ ಏಳನೇ ತರಗತಿಯ ಬೋಧನಾ ತರಗತಿಗಳು ಈ ಪ್ರಯತ್ನದ ಭಾಗವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಎಲ್ಲ ತರಗತಿಗಳ ಮಕ್ಕಳಿಗೆ ಪಠ್ಯ ಪುಸ್ತಕಗಳು ಪೂರೈಕೆಯಾಗಿವೆ. ಶಾಲೆಗಳಲ್ಲಿ ಶಿಕ್ಷಕರು ಹಾಜರಾಗುವ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಪರಾಮರ್ಶಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಖಚಿತ ಜವಾಬ್ದಾರಿಯನ್ನು ನಿರ್ವಹಿಸಿ, ಎಲ್ಲ ತರಗತಿಗಳ ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಲಿದ್ದಾರೆ ಎಂದಿದ್ದಾರೆ.
ಖಾಸಗಿ ಶಾಲೆಗಳು ಅನುಸರಿಸುತ್ತಿರುವ ಪರ್ಯಾಯ ಕ್ರಮಗಳೂ ಸಹ ವಿದ್ಯಾರ್ಥಿಗಳ ಕಲಿಕೆಯನ್ನು ಪ್ರೇರೇಪಿಸುವಂತಹವುಗಳೇ ಆಗಿದೆ. ಯಾವ ವಿದ್ಯಾರ್ಥಿಯೂ ಕಲಿಕೆಯ ಅವಕಾಶದಿಂದ ವಂಚನೆಯಾಗದ ಕಾರಣ ಈ ವರ್ಷವನ್ನು ಶೈಕ್ಷಣಿಕ ಶೂನ್ಯ ಕಲಿಕಾ ವರ್ಷ ಎನ್ನಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶೈಕ್ಷಣಿಕ ಶೂನ್ಯ ಕಲಿಕಾ ವರ್ಷ ಅಥವಾ zero_academic_year ಎಂಬ ಪದ ಇತ್ತೀಚೆಗೆ ಹುಟ್ಟಿದೆ ಮತ್ತು ಈ ಕುರಿತು ಅನಗತ್ಯ ಗೊಂದಲ ಉಂಟಾಗುತ್ತಿದೆ. ಆದರೆ ಆ ರೀತಿಯ ಕಲಿಕಾ ರಹಿತ ವರ್ಷ ಎಂಬ ಕಲ್ಪನೆ ಸಹ ಶಿಕ್ಷಣ ಇಲಾಖೆಗೆ ಇಲ್ಲ. ನಾನು ಇಂದು ಈ ಕುರಿತು ಬಹಳ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಸಚಿವರು ಹೇಳಿದ್ದಾರೆ.