ಆನ್‌ಲೈನ್‌ನಲ್ಲಿ ಮದ್ಯ ಮಾರಾಟ? ಅಬಕಾರಿ ಸಚಿವರು ಏನು ಹೇಳಿದರು?
ಬೀದರ್: ಮದ್ಯ ದರ ಏರಿಕೆ ಹಾಗೂ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ವಿಚಾರವಾಗಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಅವರು ಬೀದರ್‌ನಲ್ಲಿ ಇಂದು ಸ್ಪಷ್ಟನೆ ನೀಡಿದ್ದಾರೆ.
ಆನ್‌ಲೈನ್ ಮಾರಾಟ ಯಾವತ್ತೂ ಮಾಡುವುದಿಲ್ಲ, ಅದರ ಸಾಧ್ಯತೆಯೂ ಇಲ್ಲ. ಮುಂದೆಯೂ ಮಾಡುವುದಿಲ್ಲ. ನಮ್ಮ ಯೋಚನೆಯಲ್ಲಿ ಆನ್‌ಲೈನ್ ಮಾರಾಟವಿಲ್ಲ. ನೋ ಸ್ವಿಗ್ಗಿ, ನೋ ಜೊಮ್ಯಾಟೋ ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮದ್ಯದ ದರ ಏರಿಕೆ ಆಗಿಲ್ಲ. ನೆರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಚೀಪ್ ಲಿಕ್ಕರ್ ನಲ್ಲಿ ಕಡಿಮೆ ಇದ್ದೇವೆ. ಬೇರೆ ರಾಜ್ಯದಿಂದ ಪ್ರಿಮಿಯಮ್ ಬ್ರ್ಯಾಂಡ್ ದರದಲ್ಲಿ ಸ್ವಲ್ಪ ಹೆಚ್ಚಿರುವುದರಿಂದ ನಮಗೆ ಆದಾಯದ ಹೊಡೆತ ಬೀಳುತ್ತಿದೆ. ಬೇರೆ ರಾಜ್ಯದಲ್ಲಿ ಪ್ರೀಮಿಯಮ್ ಬ್ರ್ಯಾಂಡ್ ದರ ಕಡಿಮೆ ಇರುವುದರಿಂದ ಇಲ್ಲಿಗೆ ಆಮದು ಆಗುತ್ತಿದ್ದು, ಇದನ್ನು ತಡೆಗಟ್ಟುತ್ತೇವೆ ಎಂದು ತಿಳಿಸಿದರು.ಶಾಲೆ ಸುತ್ತ, ಉದ್ಯಾನವನಗಳಲ್ಲಿ ಮದ್ಯ ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಡಿಸಿ, ಎಸ್ಪಿ ಅವರಿಗೆ ಸೂಚನೆ ನೀಡಿದ್ದೇನೆ. ಡಾಬಾ, ಅಂಗಡಿ ಸೇರಿದಂತೆ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡಿದರೂ ಕ್ರಮ ಎಂದರು.
ಮದ್ಯ ಸೇವನೆ ಮಾಡುವ ಗ್ರಾಹಕರ ಸಂಖ್ಯೆ ಹಾಗೂ ಬೇಡಿಕೆ ಹೆಚ್ಚಾಗಿದೆ. ಮದ್ಯದಂಗಡಿಗಳ ಸಂಖ್ಯೆ ಕಡಿಮೆಯಾಗಿದೆ, ಹೀಗಾಗಿ ಎಲ್ಲೆಂದರಲ್ಲಿ ಕುಡಿಯುತ್ತಿದ್ದಾರೆ. ಇದನ್ನು ನಿಯಂತ್ರಿಸುವುದಕ್ಕಾಗಿ ಸಿಎಲ್-7 ಹೆಚ್ಚಿಗೆ ಕೊಡುತ್ತಿದ್ದೇವೆ. ಹೊರಗಡೆ ಕುಡಿಯುವುದನ್ನು ನಿಯಂತ್ರಿಸುವುದಕ್ಕೆ ಪೊಲೀಸರಿಗೆ ತಿಳಿಸುತ್ತಿದ್ದೇವೆ ಎಂದು ತಿಳಿಸಿದರು.