ಹೆಮ್ಮಾಡಿ ಅಮೋನಿಯಾ ಸೋರಿಕೆ ಪ್ರಕರಣ ನಿರ್ದಾಕ್ಷಿಣ್ಯ ಕ್ರಮ : ಜಿಲ್ಲಾಧಿಕಾರಿ

ಕುಂದಾಪುರ: ಹೆಮ್ಮಾಡಿ ಸಮೀಪದ ದೇವಲ್ಕುಂದದಲ್ಲಿರುವ ಮೀನು ಸಂಸ್ಕರಣಾ ಘಟಕದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಅಮೋನಿಯಾ ಸೋರಿಕೆ ಘಟನೆಯಿಂದಾಗಿ ಕಾರ್ಖಾನೆ ಆವರಣದಲ್ಲಿ ಇದ್ದ 70ಕ್ಕೂ ಅಧಿಕ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾಧಿಕಾರಿ, ಎಸ್‌.ಪಿ ಭೇಟಿ: 

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಎಸ್‌ಪಿ ನೀಶಾ ಜೇಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕರ ಆರೋಗ್ಯ ವಿಚಾರಿಸಿದರು. ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ವಸಂತಕುಮಾರ ಅವರ ನೇತೃತ್ವದಲ್ಲಿ ಸಿಬ್ಬಂದಿ ಉತ್ತಮ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದರಿಂದಾಗಿ ಹೆಚ್ಚಿನ ಅನಾಹುತ ಆಗದಂತೆ ಅಮೋನಿಯಾ ಸೋರಿಕೆ ನಿಯಂತ್ರಣಕ್ಕೆ ತಂದಿದ್ದಾರೆ’ ಎಂದು ಡಿಸಿ ಕಾರ್ಯಾಚರಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮೀನು ಸಂಸ್ಕರಣಾ ಕೇಂದ್ರದ ಕುರಿತು ಉಪ ವಿಭಾಗಾಧಿಕಾರಿಯಿಂದ ವರದಿ ಪಡೆದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಅಧಿಕಾರಿಗಳ ಭೇಟಿಯ ವೇಳೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ‘ಅಮೋನಿಯಾ ಸೋರಿಕೆಯ ಬಗ್ಗೆ ಕಾರ್ಖಾನೆಯವರು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ವಾಸನೆಯಿಂದಾಗಿ ನಾವೆಲ್ಲ ಮನೆಯಿಂದ ಹೊರ ಬಂದಿದ್ದೆವು. ಒಂದು ವೇಳೆ ಇದು ನಿಯಂತ್ರಣಕ್ಕೆ ಬಾರದೆ ಇದ್ದಲ್ಲಿ ಇದರಿಂದಾಗುವ ಅನಾಹುತಕ್ಕೆ ಯಾರು ಹೊಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಡಾ.ಮಧುಕೇಶ್ವರ, ಡಿವೈಎಸ್‌ಪಿ ಬಿ.ಪಿ.ದಿನೇಶ್‌ಕುಮಾರ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಜಿ. ಪುತ್ರನ್‌, ತಹಶೀಲ್ದಾರ್‌ ತಿಪ್ಪೇಸ್ವಾಮಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಬೈಂದೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪ್ರೇಮಾನಂದ, ಪರಿಸರ ಇಲಾಖೆಯ ಅಧಿಕಾರಿ ಲಕ್ಷ್ಮೀಕಾಂತ, ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿ ಶ್ರೀಧರ ನಾಯ್ಕ್‌, ಅಗ್ನಿಶಾಮಕ ಘಟಕದ ಅಧಿಕಾರಿಗಳಾದ ಕೊರಗ ನಾಗ ಮೊಗೇರ ಹಾಗೂ ಗೋಪಾಲ ಇದ್ದರು.

ಕಟ್‌ಬೇಲ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಲ್ಕುಂದ ಎಂಬಲ್ಲಿ ಮೀನು ಸಂಸ್ಕರಣಾ ಉದ್ಯಮ ನಡೆಸುತ್ತಿರುವ ಮಲ್ಪೆ ಫ್ರೆಶ್ ಮರೈನ್ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ನಲ್ಲಿ ಸೋಮವಾರ ಬೆಳಿಗ್ಗೆ 5.30ರಿಂದ 6 ಗಂಟೆಯ ನಡುವೆ ಆಕಸ್ಮಿಕವಾಗಿ ಈ ಅವಘಡ ಸಂಭವಿಸಿದೆ.
ಬೆಳಿಗ್ಗೆ ಕಾರ್ಖಾನೆಯ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಮೋನಿಯಾ ದ್ರಾವಣ ಸರಬರಾಜು ಮಾಡುವ ಪೈಪ್‌ನ ಟ್ಯಾಪ್‌ನಲ್ಲಿ ಸೋರಿಕೆಯಾಗುವುದು ಬೆಳಕಿಗೆ ಬಂದಿತ್ತು. ಇದನ್ನು ಗಮನಿಸಿದ್ದ ಸಿಬ್ಬಂದಿ ಮುಖ್ಯ ಪೈಪ್‌ ಮೂಲಕ ಸಾಗುವ ಅಮೋನಿಯಾ ಸರಬರಾಜನ್ನು ನಿಲ್ಲಿಸಿದ್ದರು. ಅದಾಗಲೇ ಅಮೋನಿಯಾ ಸೋರಿಕೆಯ ಪರಿಣಾಮ ವಾತಾವರಣ ಮೇಲಾಗಿದ್ದರಿಂದ ಭಯಭೀತರಾಗಿ ಸಂಸ್ಕರಣಾ ಘಟಕದಿಂದ ಹೊರಕ್ಕೆ ಬಂದ ಕಾರ್ಮಿಕರು, ಪೊಲೀಸ್‌ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದರು.
ಸಮೀಪದ ವಸತಿಗೃಹದಲ್ಲಿ ಮಲಗಿದ್ದ ಮಹಿಳಾ ಕಾರ್ಮಿಕರಿಗೆ ಅಮೋನಿಯಾ ಸೋರಿಕೆ ಗಮನಕ್ಕೆ ಬಾರದೆ ಇರುವುದರಿಂದಾಗಿ, ಗಾಳಿಯೊಂದಿಗೆ ಒಳ ಪ್ರವೇಶಿಸಿದ ಅಮೋನಿಯಾ ಸೇವನೆ ಹಾಗೂ ಸೊಂಕಿನಿಂದಾಗಿ 70ಕ್ಕೂ ಅಧಿಕ ಮಂದಿಗೆ ಎದೆ ಉರಿ, ಉಸಿರಾಟ ತೊಂದರೆ ಹಾಗೂ ವಾಂತಿ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ಕಾರ್ಮಿಕರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಸಕಾಲದಲ್ಲಿ ಆಸ್ಪತ್ರೆಗೆ ಬಂದಿದ್ದರಿಂದ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತಕ್ಷಣ ಸ್ಪಂದಿಸಿದ್ದರಿಂದಾಗಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಕುಂದಾಪುರದಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹಾಯಿಸುವ ಮೂಲಕ ಅಮೋನಿಯಾ ಸೋರಿಕೆಯ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಅದು ನಿಯಂತ್ರಣಕ್ಕೆ ಬಾರದೆ ಇದ್ದುದರಿಂದ ಉಡುಪಿ ಅಗ್ನಿಶಾಮಕ ಘಟಕದ ನೆರವು ಪಡೆದುಕೊಳ್ಳಲಾಯಿತು. ನಿರಂತರ ಕಾರ್ಯಾಚರಣೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!