ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ನಲುಗಿದ ಜನತೆ; ೧೨ ಸಾವು

 ಬೆಂಗಳೂರು: ಮಳೆಯ ಅಬ್ಬರ ಮತ್ತು ಉಕ್ಕೇರಿ ಹರಿಯತ್ತಿರುವ ನದಿಗಳ ಪ್ರವಾಹದಿಂದಾಗಿ 15 ಕ್ಕೂ ಹೆಚ್ಚು ಜಿಲ್ಲೆಗಳ ಜನರು ಕಂಗೆಟ್ಟು ಹೋಗಿದ್ದು, ನೆರವಿಗಾಗಿ ಮೊರೆ ಇಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಕುಡಿಯುವ ನೀರು, ಆಹಾರ, ವಿದ್ಯುತ್‌ ದೀಪ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಹದ ನೀರಿನಿಂದ ಹಲವು ಗ್ರಾಮಗಳು ಮತ್ತು ಪಟ್ಟಣಗಳು ದ್ವೀಪ ಗಳಾಗಿ ಮಾರ್ಪಾಡಾಗಿವೆ. ಉತ್ತರ ಕರ್ನಾಟಕದ ಎಲ್ಲ ಅಣೆಕಟ್ಟೆಗಳಿಂದ ಬುಧವಾರವೂ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗಿದೆ. ನದಿ ಪಾತ್ರದ ಗ್ರಾಮಗಳು ಸಂಕಷ್ಟಕ್ಕೆ ಸಿಲು ಕಿವೆ. ಕೆಲವು ಕಡೆಗಳಲ್ಲಿ ನೀರಿನ ಮಧ್ಯೆ ಸಿಲುಕಿದವರನ್ನು ರಕ್ಷಿಸಲು ಸೇನಾ ಸಿಬ್ಬಂದಿಗೂ ಸಾಧ್ಯವಾಗದೇ ಇರುವ ಪ್ರಕರಣಗಳು ವರದಿಯಾಗಿವೆ.
ಮಳೆ, ಪ್ರವಾಹದಿಂದ ಬುಧವಾರ 11 ಮಂದಿ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಎಂಟು ಮಂದಿ ಮತ್ತು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಆದರೆ ಸರ್ಕಾರದ ಪ್ರಕಾರ ಸಾವಿನ ಸಂಖ್ಯೆ ಐದು.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌, ಭೂಸೇನೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಪ್ರವಾಹದಲ್ಲಿ ಸಿಲುಕಿದ್ದ 25,794 ಜನರನ್ನು ರಕ್ಷಿಸಲಾಗಿದೆ.
ರಸ್ತೆ, ಸೇತುವೆಗಳ ಮೇಲೆ ಹರಿದ ನದಿ: ಪ್ರಮುಖ ನದಿಗಳು ಉಕ್ಕಿ ಹರಿಯು ತ್ತಿರುವ ಕಾರಣ ಹಲವು ಜಿಲ್ಲೆಗಳಲ್ಲಿ ಪ್ರಮುಖ ರಸ್ತೆ ಸಂಪರ್ಕ ಕಡಿತಗೊಂಡಿವೆ. ರಸ್ತೆ ಮತ್ತು ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಮಲೆನಾಡು ಭಾಗದಲ್ಲಿ ಗುಡ್ಡಗಳು ಕುಸಿಯುತ್ತಿರುವುದರಿಂದ ಘಾಟಿ ರಸ್ತೆಗಳಲ್ಲೂ ಸಂಚಾರಕ್ಕೆ ಅಡಚಣೆಯಾಗಿದೆ.
ಕೊಡಗು ಜಿಲ್ಲೆಯಾದ್ಯಂತ ಮಳೆ, ಗಾಳಿಗೆ ಜನರು ಹೆದರಿ ಮನೆಯಿಂದ ಹೊರ ಬರುತ್ತಿಲ್ಲ. ಬಹುತೇಕ ಗ್ರಾಮ ಗಳಿಗೆ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಬ್ಬರಿಸುತ್ತಿವೆ. ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ಧಾರವಾಡ ಜಿಲ್ಲೆಗಳಲ್ಲೂ ಮಳೆ ಅಬ್ಬರ ಮುಂದುವರಿದಿದೆ.
ಅಥಣಿ ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ಕೃಷ್ಣಾ ನದಿ ದಾಟುತ್ತಿದ್ದ ಬಾಲಕ ನೀರು ಪಾಲಾಗಿದ್ದಾನೆ. ಗೋಕಾಕ  ಗ್ರಾಮದಲ್ಲಿ ಕೃಷ್ಣಾ ನದಿ ದಾಟುತ್ತಿದ್ದ ಬಾಲಕ ನೀರು ಪಾಲಾಗಿದ್ದಾನೆ. ಗೋಕಾಕ ತಾಲ್ಲೂಕಿನ ಲೊಳಸೂರ ಗ್ರಾಮದಲ್ಲಿ ಮನೆ ಕುಸಿದು ಮಹಿಳೆಯೊಬ್ಬರು, ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಸಮೀಪದ ಚಂದನಹೊಸೂರಿನಲ್ಲಿ ಮನೆ ಕುಸಿದಿದ್ದರಿಂದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ಶಾಲಾ– ಕಾಲೇಜು ರಜೆ
ಕೊಡಗು ಜಿಲ್ಲೆಯಲ್ಲಿ ಇದೇ 8 ಮತ್ತು 9 ರಂದು ಶಾಲಾ– ಕಾಲೇಜುಗಳಿಗೆ ರಜೆ ನೀಡಲಾಗಿದೆ. ಧಾರವಾಡ, ಬಾಗಲಕೋಟೆ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಆ.10 ರವರೆಗೆ ರಜೆ ವಿಸ್ತರಿಸಲಾಗಿದೆ. ಹಾವೇರಿ, ಉತ್ತರ ಕನ್ನಡ, ಹಾಸನ, ಗದಗ ಜಿಲ್ಲೆಯ ನರಗುಂದ, ರೋಣ ತಾಲ್ಲೂಕುಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ರಜೆ ಘೋಷಿಸಲಾಗಿದೆ.
ಸಿಇಟಿ ಶುಲ್ಕ ಪಾವತಿ ಅವಧಿ ವಿಸ್ತರಣೆ: ಸಿಇಟಿ ಮೂರನೇ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವ ಗಡುವನ್ನು ಒಂದು ವಾರ ವಿಸ್ತರಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಶುಲ್ಕ ಪಾವತಿಗೆ ಬುಧವಾರ ಕೊನೆಯ ದಿನವಾಗಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಇರುವ ಕಾರಣ ಈ ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ರಸ್ತೆ ಸಂಪರ್ಕ ಬಂದ್
* ಮಡಿಕೇರಿ– ಭಾಗಮಂಡಲ–ತಲಕಾವೇರಿ * ಚಿಕ್ಕಮಗಳೂರು– ಧರ್ಮಸ್ಥಳ (ಚಾರ್ಮಾಡಿ ಘಾಟ್‌) * ಯಲ್ಲಾಪುರ– ಅಂಕೋಲಾ * ಹುಬ್ಬಳ್ಳಿ– ಯಲ್ಲಾಪುರ * ಬೆಳಗಾವಿ– ಪಣಜಿ(ಚೋರ್ಲಾ ಘಾಟ್) lಬೆಳಗಾವಿ– ಪೊಂಡಾ (ವಯಾ ಖಾನಾಪುರ ) * ಮುಂಡಗೋಡ– ಶಿರಸಿ * ಶಿರಸಿ– ಕುಮಟಾ (ಕತಗಾಲ) * ಜಮಖಂಡಿ– ವಿಜಯಪುರ lಬೆಳಗಾವಿ– ಗೋಕಾಕ * ಕಾಗವಾಡ– ಮೀರಜ್ * ಚಿಕ್ಕೋಡಿ– ಇಚಲಕರಂಜಿ * ನಿಪ್ಪಾಣಿ–ಕೊಲ್ಹಾಪುರ * ಗೋಕಾಕ– ವಿಜಯಪುರ * ನಿಪ್ಪಾಣಿ– ಹುಪರಿ * ಅಥಣಿ– ಕುಡಚಿ * ಜಮಖಂಡಿ– ಸಾವಳಗಿ
* ಜಮಖಂಡಿ– ಗುಡ್ಡಾಪುರ (ಚಿಕ್ಕಪಡಸಲಗಿ ಬ್ಯಾರೇಜ್) * ರಾಯಚೂರು–ಯಾದಗಿರಿ
ಇಂದೂ ಭಾರಿ ಮಳೆ ಸಾಧ್ಯತೆ: ಕರಾವಳಿ, ಮಲೆನಾಡು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಗುರುವಾರವೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರವಾಹದಿಂದ ಹಾನಿ, ಪರಿಹಾರ
* ಉತ್ತರ ಕರ್ನಾಟಕ : ಪ್ರವಾಹದಿಂದ ಬಾಧಿತ ತಾಲ್ಲೂಕು 18, ಗ್ರಾಮಗಳು 162
* ಜನರ ಸ್ಥಳಾಂತರ 25,794
* ಗಂಜಿ ಕೇಂದ್ರಗಳ ಸ್ಥಾಪನೆ 92, ಇರುವ ಜನ 7784
ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ– ಬಿಎಸ್‌ವೈ ಘೋಷಣೆ.

Leave a Reply

Your email address will not be published. Required fields are marked *

error: Content is protected !!