ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಅನುಮತಿ

ಮಂಗಳೂರು(ಉಡುಪಿ ಟೈಮ್ಸ್ ವರದಿ): ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನೆ ಸಂಸ್ಥೆ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಲು ಬದ್ಧ ಎಂದು ಸರಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳನ್ನು ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ.

ಪಚ್ಚನಾಡಿ, ಕುಡುಪು, ಮಂದಾರ ಪ್ರದೇಶದಲ್ಲಿನ ಘನತ್ಯಾಜ್ಯ ಭೂ ಭರ್ತಿ ಘಟಕದಿಂದ ಉಂಟಾದ ಅನಾಹುತದ ಕುರಿತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು. ಮಾ.15 ರಂದು ಕರ್ನಾಟಕ ಕಾನೂನು ಸೇವಾ ಪ್ರಾದಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ಹಾಗೂ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠದ ಮುಂದೆ ನಡೆಸಲಾಯಿತು.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಲಿ. ಪರ ಅಡ್ವಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಹಾಜರಾಗಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಕಟ್ಟಡ ಹಾಗೂ ಇತರ ನಿರ್ಮಾಣ ಕಾಮಗಾರಿಗಳಲ್ಲಿ ನೀರಿ ಸಂಸ್ಥೆ ಸೂಚಿಸಿದ ಮಾರ್ಗಸೂಚಿಗಳ್ನು ಪಾಲಿಸುವುದಾಗಿ ನ್ಯಾಯಪೀಠಕ್ಕೆ ಭರವಸೆ ನೀಡಿದರು. ಅಲ್ಲದೆ ಈ ಕುರಿತಾಗಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮುಚ್ಚಳಿಕೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.  ಅದರಂತೆ ನ್ಯಾಯಪೀಠ ನೀರಿ ಮಾರ್ಗಸೂಚಿಗಳನ್ನು ಪಾಲಿಸುವ ಬಗ್ಗೆ ಅಡ್ವಕೇಟ್ ಜನರಲ್ ನೀಡಿರುವ ಭರವಸೆ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿರುವ ಮುಚ್ಚಳಿಕೆ ಆಧರಿಸಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಮುಂದುವರಿಸಲು ಅನುಮತಿ ನೀಡುವುದಾಗ ಆದೇಶಿಸಿತು.

ಇದೇ ವೇಳೆ ಕಾಮಗಾರಿಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಕೋರಿ ಮಂಗಳೂರು ಸ್ಮಾರ್ಟ್ ಸಿಟಿ ಲಿ. ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ನೀರಿ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ಕಾಮಗಾರಿಗಳನ್ನು ಆರಂಭಿಸುವ ಕುರಿತು ನಿರ್ದೇಶಕ ಮಂಡಳಿಯ ಸಭೆಯಲ್ಲಿ ಕೈಗೊಂಡ ತೀರ್ಮಾನದ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿದೆ.

Leave a Reply

Your email address will not be published. Required fields are marked *

error: Content is protected !!