ಬಾಲಾಕೋಟ್‌ ದಾಳಿ ಮಾಹಿತಿಯು ಪಾಕಿಸ್ತಾನಕ್ಕೂ ಸೋರಿಕೆಯಾಗಿತ್ತೇ ?: ಪಿ.ಚಿದಂಬರಂ

ನವದೆಹಲಿ: ಬಾಲಾಕೋಟ್‌ ಮೇಲಿನ ವಾಯುದಾಳಿಯ ಗುಪ್ತಚರ ಮಾಹಿತಿ ಸೋರಿಕೆಯಾಗಿತ್ತು ಎಂಬ ವರದಿಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದೆ. ಇಂತಹ ರಹಸ್ಯ ಮಾಹಿತಿಯು ಪಾಕಿಸ್ತಾನದ ಗೂಢಚರರು ಮತ್ತು ಆ ದೇಶದ ಪರವಾಗಿ ಕೆಲಸ ಮಾಡುವ ಮಾಹಿತಿದಾರರಿಗೂ ತಲುಪಿದೆಯೇ ಎಂದು ಪ್ರಶ್ನಿಸಿದೆ.

‘ನಿಜವಾದ ದಾಳಿ ನಡೆದ ಮೂರು ದಿನಗಳಿಗೆ ಮುಂಚೆಯೇ ವಾಯುದಾಳಿಯ ಮಾಹಿತಿಯು ಒಬ್ಬ ಪತ್ರಕರ್ತನಿಗೆ (ಮತ್ತು ಅವರ ಗೆಳೆಯ) ತಿಳಿದಿತ್ತೇ? ಹೌದು ಎಂದಾದರೆ, ಅವರ ‘ಮೂಲ’ವು ಈ ಮಾಹಿತಿಯನ್ನು ಪಾಕಿಸ್ತಾನದ ಗೂಢಚರರು ಅಥವಾ ಮಾಹಿತಿದಾರರು ಸೇರಿದಂತೆ ಬೇರೆಯವರೊಂದಿಗೆ ಹಂಚಿಕೊಂಡಿಲ್ಲ ಎಂಬುದಕ್ಕೆ ಏನು ಖಾತರಿ ಇದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ. 

ರಹಸ್ಯವಾದ ನಿರ್ಧಾರವು ಸರ್ಕಾರವು ಬೆಂಬಲಿಸುವ ಪತ್ರಕರ್ತನಿಗೆ ಸಿಕ್ಕಿದ್ದು ಹೇಗೆ ಎಂದೂ ಚಿದಂಬರಂ ಕೇಳಿದ್ದಾರೆ. ‘ಬಾಲಾಕೋಟ್‌ ದಾಳಿಗೆ ಸಂಬಂಧಿಸಿದ ಸೇನಾ ರಹಸ್ಯಗಳು ಮತ್ತು ಕಾರ್ಯತಂತ್ರವು ಕೇಂದ್ರ ಸರ್ಕಾರದಲ್ಲಿಯೇ ಇರುವವರಿಂದ ಅವರ ಲಾಭಕ್ಕಾಗಿ ಬೇರೆಯವರಿಗೆ ಸೋರಿಕೆಯಾಗಿದೆ ಎಂದರೆ ಅದು ಬಹುದೊಡ್ಡ ಭದ್ರತಾ ಲೋಪ. ಈ ಬಗ್ಗೆ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಅಗತ್ಯ. ಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯ ಸೋರಿಕೆಯು ದೇಶದ್ರೋಹ’ ಎಂದು ಛತ್ತೀಸಗಡ ಆರೋಗ್ಯ ಸಚಿವ ಟಿ.ಎಸ್‌. ಸಿಂಹದೇವ್‌ ಹೇಳಿದ್ದಾರೆ. 

ರಿಪಬ್ಲಿಕ್‌ ಟಿ.ವಿ. ಸಂಪಾದಕ ಅರ್ನಬ್‌ ಗೋಸ್ವಾಮಿ ಮತ್ತು ಬ್ರಾಡ್‌ಕಾಸ್ಟ್‌ ಆಡಿಯೆನ್ಸ್‌ ರಿಸರ್ಚ್‌ ಕೌನ್ಸಿಲ್‌ನ ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಆ್ಯಪ್‌ ಚಾಟ್‌ಗೆ ಸಂಬಂಧಿಸಿದ ದತ್ತಾಂಶಗಳನ್ನು ಪರಿಶೀಲಿಸಲಾಗುವುದು. ಆ ಬಳಿಕ ಕಾಂಗ್ರೆಸ್‌ ಪಕ್ಷವು ಅಧಿಕೃತ ಹೇಳಿಕೆ ನೀಡಲಿದೆ ಎಂದು ಆ ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
 
ಸೇನಾ ಕಾರ್ಯತಂತ್ರದ ಮಾಹಿತಿ ಸೋರಿಕೆಯು ಗಂಭೀರ ವಿಚಾರ. ಈ ಬಗ್ಗೆ ತನಿಖೆಯಾಗಿ ಸೋರಿಕೆಯ ಮೂಲ ಬಹಿರಂಗಆಗಬೇಕು. ಅವರಿಗೆ ಶಿಕ್ಷೆಯಾಗಬೇಕು
ಗೌರವ್‌ ಗೊಗೊಯ್‌ ಲೋಕಸಭೆಯಲ್ಲಿ ಕಾಂಗ್ರೆಸ್‌ನಉಪನಾಯಕ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!